93,240 ಕೋಟಿ ರೂ.ಗೂ ಅಧಿಕ ಅಸುರಕ್ಷಿತ ಸಾಲಗಳ ಮೇಲೆ ಕುಳಿತಿರುವ ಬ್ಯಾಂಕುಗಳು: ವರದಿ
ಹೊಸದಿಲ್ಲಿ: ಅಸುರಕ್ಷಿತ ಸಾಲಗಳಲ್ಲಿ ತೀವ್ರ ಏರಿಕೆಗೆ ಬ್ಯಾಂಕೇತರ ಹಣಕಾಸು ಕಂಪನಿ (ಎನ್ಬಿಎಫ್ಸಿ) ಗಳನ್ನು,ವಿಶೇಷವಾಗಿ ಲೆಂಡಿಂಗ್ ಆ್ಯಪ್ಗಳ ಮೂಲಕ ಸಾಲಗಳನ್ನು ನೀಡುವ ಫಿನ್ಟೆಕ್ ಕಂಪನಿಗಳನ್ನು ಬ್ಯಾಂಕುಗಳು ದೂಷಿಸುತ್ತಿವೆ. ಆದರೆ ಇದೇ ವೇಳೆ ಅವು ಸ್ವತಃ ವಿಶೇಷ ಉಲ್ಲೇಖ ಖಾತೆಗಳ (ಎಸ್ಎಂಎ) ವರ್ಗದಲ್ಲಿರುವ 93,240 ಕೋಟಿ ರೂ.ಗೂ ಅಧಿಕ ಮೊತ್ತದ ಅಸುರಕ್ಷಿತ ಸಾಲಗಳ ಮೇಲೆ ಕುಳಿತಿವೆ. ಇವು ಒತ್ತಡದ ಸಂಕೇತಗಳನ್ನು ತೋರಿಸುತ್ತಿರುವ ಅಥವಾ ಮರುಪಾವತಿ ಅವಧಿ ಮುಗಿದಿರುವ ಸಾಲಗಳಾಗಿವೆ.
ಕೇರ್ ರೇಟಿಂಗ್ಸ್ ಪ್ರಕಾರ,2023,ಮಾ.31ಕ್ಕೆ ಇದ್ದಂತೆ ಈ ಎಸ್ಎಂಎಗಳು ಬ್ಯಾಂಕುಗಳ ಒಟ್ಟು ಬಾಕಿಯಿರುವ 13.32 ಲಕ್ಷ ಕೋಟಿ ರೂ.ಅಸುರಕ್ಷಿತ ಸಾಲಗಳ ಸುಮಾರು ಶೇ.7ರಷ್ಟಿವೆ (ಖಾಸಗಿ ಬ್ಯಾಂಕುಗಳಲ್ಲಿ ಇದು ಶೇ.4ರಷ್ಟಿದೆ). ಸುರಕ್ಷಿತ ಚಿಲ್ಲರೆ ಸಾಲಗಳಲ್ಲಿಯೂ ಎಸ್ಎಂಎ ಪಾಲು ಶೇ.7ರಷ್ಟಿದೆ.
ಆರ್ಬಿಐ ಎಸ್ಎಂಎಗಳನ್ನು 3 ಉಪವರ್ಗಗಳಲ್ಲಿ ವಿಭಜಿಸಿದೆ. ಎಸ್ಎಂಎ-0 ವರ್ಗದಲ್ಲಿ ಅಸಲು ಅಥವಾ ಬಡ್ಡಿ ಪಾವತಿಯು 30 ದಿನಗಳಿಗಿಂತ ಹೆಚ್ಚಿನ ಅವಧಿಗೆ ಸುಸ್ತಿಯಾಗಿರುವುದಿಲ್ಲ, ಆದರೆ ಖಾತೆಯು ಆರಂಭಿಕ ಒತ್ತಡದ ಲಕ್ಷಣಗಳನ್ನು ತೋರಿಸುತ್ತದೆ. ಎಸ್ಎಂಎ-1 ವರ್ಗದಲ್ಲಿ ಅಸಲು ಅಥವಾ ಬಡ್ಡಿ 31ರಿಂದ 60 ದಿನಗಳ ವರೆಗೆ ಪಾವತಿಯಾಗಿರುವುದಿಲ್ಲ ಮತ್ತು 61ರಿಂದ 90 ದಿನಗಳವರೆಗೆ ಪಾವತಿ ಬಾಕಿಯಿರುವ ಸಾಲಗಳು ಎಸ್ಎಂಎ-2ರಡಿ ಬರುತ್ತವೆ. ಮರುಪಾವತಿ 90 ದಿನಗಳಿಗೂ ಹೆಚ್ಚು ವಿಳಂಬವಾದರೆ ಅಂತಹ ಸಾಲಗಳನ್ನು ಅನುತ್ಪಾದಕ ಆಸ್ತಿ (ಎನ್ಪಿಎ)ಗಳು ಎಂದು ಪರಿಗಣಿಸಲಾಗುತ್ತದೆ.
2017 ಮಾರ್ಚ್ ಮತ್ತು 2023 ಮಾರ್ಚ್ ನಡುವೆ ಬ್ಯಾಂಕುಗಳಲ್ಲಿ ಅಸುರಕ್ಷಿತ ವೈಯಕ್ತಿಕ ಸಾಲಗಳ ಮೊತ್ತ ಶೇ.21ರಷ್ಟು ಏರಿಕೆಯಾಗಿದೆ. ಇದು ಇದೇ ಅವಧಿಯಲ್ಲಿ ವೈಯಕ್ತಿಕ ಸಾಲ ನೀಡಿಕೆ ಬೆಳವಣಿಗೆ (ಶೇ.19)ಯನ್ನು ಮೀರಿಸಿದೆ.
ಬ್ಯಾಂಕುಗಳು ಎನ್ಡಿಎಫ್ಸಿಗಳಿಗೆ ಸಾಲ ನೀಡಿಕೆಯನ್ನು ಹೆಚ್ಚಿಸುತ್ತಿವೆ. 2021,ಮಾರ್ಚ್ನಲ್ಲಿ 7.75 ಲಕ್ಷ ಕೋಟಿ ರೂ.ಗಳಿದ್ದ ಈ ಸಾಲಗಳು 2022, ಸೆಪ್ಟಂಬರ್ಗೆ 9.23 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿವೆ. ಆರ್ಬಿಐ ಸ್ಥಾಪಿಸಿರುವ ಸೆಂಟರ್ ಫಾರ್ ಅಡ್ವಾನ್ಸ್ಡ್ ಫೈನಾನ್ಶಿಯಲ್ ರೀಸರ್ಚ್ ಆ್ಯಂಡ್ ಲರ್ನಿಂಗ್ (ಸಿಎಎಫ್ಆರ್ಎಎಲ್) ಎನ್ಬಿಎಫ್ಸಿ ಗಳಿಗೆ ಬ್ಯಾಂಕುಗಳು ನೀಡುವ ಸಾಲಗಳು ಹೆಚ್ಚುತ್ತಿರುವ ಬಗ್ಗೆ ಇತ್ತೀಚಿಗೆ ಕಳವಳವನ್ನು ವ್ಯಕ್ತಪಡಿಸಿತ್ತು.
ಎನ್ಬಿಎಫ್ಸಿ ಗಳನ್ನು ಅವುಗಳ ಒತ್ತಡದಲ್ಲಿರುವ ಸಾಲಗಳ ಏರಿಕೆಗಾಗಿ ದೂಷಿಸಿದರೆ ಅವುಗಳಿಗೆ ಹಣಕಾಸು ಒದಗಿಸುವ ಬ್ಯಾಂಕುಗಳೂ ಅದಕ್ಕೆ ಜವಾಬ್ದಾರರಾಗಿರುತ್ತವೆ ಎಂದು ಹಣಕಾಸು ಕ್ಷೇತ್ರದ ಮೂಲಗಳು ಹೇಳಿವೆ.
ಅಸುರಕ್ಷಿತ ವೈಯಕ್ತಿಕ ಸಾಲವು ಸಾಲದ ಒಂದು ವಿಧವಾಗಿದ್ದು,ಅದನ್ನು ಪಡೆಯಲು ಸಾಲಗಾರನು ಯಾವುದೇ ಮೇಲಾಧಾರ ನೀಡುವ ಅಗತ್ಯವಿಲ್ಲ. ಅಸುರಕ್ಷಿತ ಸಾಲಗಳನ್ನು ನೀಡುವಲ್ಲಿ ನೂರಾರು ಕಾನೂನುಬದ್ಧ ಮತ್ತು ಕಾನೂನುಬಾಹಿರ ಲೋನ್ ಆ್ಯಪ್ಗಳು ಮುಂಚೂಣಿಯಲ್ಲಿವೆ.
ನ.16ರಿಂದ ಆರ್ಬಿಐ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳಿಗೆ ಗ್ರಾಹಕ ಸಾಲಗಳು,ಕ್ರೆಡಿಟ್ ಕಾರ್ಡ್ ಸ್ವೀಕೃತಿಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಿದೆ. ಈ ಕ್ರಮವು ಇಂತಹ ಸಾಲಗಳನ್ನು ಹೆಚ್ಚೆಚ್ಚು ನೀಡುವುದನ್ನು ನಿರುತ್ತೇಜಿಸುವ ಉದ್ದೇಶವನ್ನು ಹೊಂದಿದೆ. 2023 ಸೆಪ್ಟಂಬರ್ನಲ್ಲಿ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ಬಾಕಿ ಕಳೆದ ವರ್ಷದ ಸೆಪ್ಟಂಬರ್ನಲ್ಲಿ ಇದ್ದ ಮೊತ್ತದ ಶೇ.29.9ರಷ್ಟು ಏರಿಕೆಯಾಗಿ 2.27 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.