ಉಡುಪಿ: ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಆರೋಪಿ ಚೌಗುಲೆ ಸೆಂಟ್ರಲ್ ಜೈಲಿಗೆ?
ಉಡುಪಿ : ಭದ್ರತೆಯ ದೃಷ್ಠಿಯಿಂದ ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿರುವ ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಯನ್ನು ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಜೈಲಾಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ನ.22ರಿಂದ ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರವೀಣ್ ಚೌಗುಲೆಯನ್ನು ಗಂಭೀರ ಪ್ರಕರಣದ ಕಾರಣಕ್ಕೆ ಸುರಕ್ಷತೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ಸೆಲ್ ಮತ್ತು ವಿಶೇಷ ಭದ್ರತೆಯೊಂದಿಗೆ ಇರಿಸಲಾಗಿದೆ. ಇದೀಗ ಜಿಲ್ಲಾ ಕಾರಾಗೃಹ ದಲ್ಲಿನ ಭದ್ರತೆ ಕೊರತೆಯ ಹಿನ್ನೆಲೆಯಲ್ಲಿ ಆತನನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಬಂಧಿಖಾನೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳು ಈಗಾಗಲೇ ಉಡುಪಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅನುಮತಿಯನ್ನು ಪಡೆದು ಕೊಂಡಿದ್ದಾರೆ. ಇದೀಗ ಬಂಧಿಖಾನೆ ಇಲಾಖೆಯ ಮೇಲಾಧಿಕಾರಿಗಳ ಅನುಮತಿಗೆ ಅಧಿಕಾರಿಗಳು ಕಾಯುತ್ತಿದ್ದು, ಅಲ್ಲಿ ಅನುಮತಿ ಸಿಕ್ಕಿದ ಕೂಡಲೇ ಆತನನ್ನು ಹೆಚ್ಚು ಸುರಕ್ಷತೆ ಹಾಗೂ ಭದ್ರತೆ ಇರುವ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸ ಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಒಟ್ಟು ಎಂಟು ಸೆಂಟ್ರಲ್ ಜೈಲುಗಳಿದ್ದು, ಇವುಗಳ ಪೈಕಿ ಯಾವುದಾದರೂ ಒಂದು ಜೈಲಿಗೆ ಈತನನ್ನು ಸ್ಥಳಾಂತರಿಸಲು ಮೇಲಾಧಿಕಾರಿಗಳು ಸೂಚಿಸಬಹುದಾಗಿದೆ. ಈತನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಅಥವಾ ಬೆಳಗಾವಿ ಜೈಲಿಗೆ ಕಳುಹಿಸುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.