ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ
ಉಡುಪಿ : ಬೆಂಗಳೂರಿನ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಸಮಗ್ರ ಸಾಹಿತ್ಯ ಸೇವೆ ಮತ್ತು ಜೀವಮಾನ ಸಾಧನೆಗಾಗಿ ಕೊಡಮಾಡುವ ಪ್ರತಿಷ್ಠಿತ 'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ'ಗೆ ಉಡುಪಿಯ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಹಾಗೂ ಲೇಖಕರೂ ಆಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ಡಿಸೆಂಬರ್ 30ರಂದು ಬೆಂಗಳೂರಿನ ನಯನ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಕೆಂಪೇಗೌಡ ಕರ್ನಾಟಕ ಪ್ರಾದೇಶಿಕ ಸಾಂಸ್ಕೃತಿಕ ಕಲಾ ಉತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರಸ್ತುತ ನಾಡಿನ ಪ್ರತಿಷ್ಠಿತ ರಂಗಭೂಮಿ ಉಡುಪಿ ಸಂಸ್ಥೆಯ ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮೂಲಕ ಜಾನಪದ ಕಲೆಯ ಉಳಿವು ಬೆಳವಣಿಗೆಗಾಗಿ ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜಾನಪದ ವೈಭವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾನಪದ ಕಲೆಗಳ ಪ್ರದರ್ಶನದ ಜೊತೆಗೆ ಸಾಧಕ ಜಾನಪದ ಕಲಾವಿದರಿಗೆ, ಜಾನಪದ ಸಂಘಟಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ನಡೆಸಿದ್ದಾರೆ. ತಮ್ಮ ಮಾತಾ ಪಿತರ ನೆನಪಿನಲ್ಲಿ ತಲ್ಲೂರು ಕನಕಾ - ಅಣ್ಯಯ್ಯ ಶೆಟ್ಟಿ ಪ್ರಶಸ್ತಿಯನ್ನು ಸ್ಥಾಪಿಸಿ ಪ್ರತೀ ವರ್ಷ ಪ್ರಸಿದ್ಧ ಯಕ್ಷಗಾನ ವಿದ್ವಾಂಸರನ್ನು ಗುರುತಿಸಿ ಅವರಿಗೆ ಪ್ರದಾನ ಮಾಡುವ ಮೂಲಕ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ, ಯಕ್ಷಗಾನದ ಸಾಧಕ ಕಲಾವಿದರನ್ನು ಗುರುತಿಸಿ
ಯಕ್ಷ ಪ್ರಶಸ್ತಿ ‘ ಯಕ್ಷಗಾನ ಪ್ರಶಸ್ತಿ'ಯನ್ನು ಪ್ರದಾನ ಮಾಡುವುದು, ಖ್ಯಾತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿ ಕಳೆದ 15 ವರ್ಷಗಳಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಯಕ್ಷಗಾನ ಕಲಾರಂಗದ ಸಹಭಾಗಿತ್ವದಲ್ಲಿ ನಡೆಯುವ
ಚಿಟ್ಟಾಣಿ ರಾಮಚಂದ್ರ ಹೆಗಡೆ ಯಕ್ಷಗಾನ ಸಪ್ತಾಹ ‘ದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಿಗೆ ನೀಡುತ್ತಿರುವುದು, ಟ್ರಸ್ಟ್ ಮೂಲಕ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿಯನ್ನು ಪ್ರಾರಂಭಿಸಿ, ಸಮಾಜದ ವಿವಿಧ ರಂಗಗಳ ಪ್ರತಿಷ್ಠಿತರು, ವಿದ್ವಾಂಸರು, ಪ್ರಸಿದ್ಧ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುವ ಕೈಂಕರ್ಯ ಮಾಡುತ್ತಿದ್ದಾರೆ. ಶಾಲಾಕಾಲೇಜು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳು, ಸಂಸ್ಕಾರವನ್ನು ಬಿತ್ತಬೇಕು ಎನ್ನುವ ಮಹಾಭಿಲಾಶೆಯೊಂದಿಗೆ ಜಿಲ್ಲೆಯ ಉದ್ದಗಲಕ್ಕೂ ಸಂಚರಿಸಿ,200ಕ್ಕೂ ಅಧಿಕ ಶಾಲಾ ಕಾಲೇಜುಗಳಿಗೆ 25000ಕ್ಕೂ ಅಧಿಕ ನೈತಿಕ ಮೌಲ್ಯಯುತ ಪುಸ್ತಕಗಳನ್ನು ಉಚಿತವಾಗಿ ಹಂಚಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಮುಂಬೆಳಕು, ಹೊಂಬೆಳಕು, ದಾರಿದೀಪ, ಪಾಥೇಯ, ಹೊಂಗಿರಣ, ಪಥ ದೀಪಿಕಾ, ಧರ್ಮಂಚರ -ನಿತ್ಯ ಸತ್ಯಗಳು ಹಾಗೂ ಕಲಾಸಂಚಯ-ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು'ಮೊದಲಾದ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ.
ಇವರ
ಕಲಾಸಂಚಯ-ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು ‘ ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ವತಿಯಿಂದ 2020ನೇ ಸಾಲಿನ ಪುಸ್ತಕ ಬಹುಮಾನ ಲಭಿಸಿದೆ ಅಲ್ಲದೆ ಇದೇ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ 2020ನೇ ಸಾಲಿನ ‘ಪುಸ್ತಕ ಸೊಗಸು’ ಗೌರವ ಪ್ರದಾನವಾಗಿದೆ. ಇವರು ಸಲ್ಲಿಸಿದ ಅನುಪಮ ಕೊಡುಗೆಗಾಗಿ ಕರ್ನಾಟಕ ಜಾನಪವ ವಿಶ್ವವಿದ್ಯಾಲಯ ಗೌರದ ಡಾಕ್ಟರೇಟ್ ನೀಡಿ ಗೌರವಿಸಿದೆ.