ಅಜ್ಜಿ, ತಂದೆಗೆ ಆಸ್ತಿ ವಂಚನೆ: ಕಾನೂನು ಹೋರಾಟಕ್ಕೆ ಸಿದ್ಧತೆ
ಉಡುಪಿ: ಕುಟುಂಬದ ಸದಸ್ಯರಿಂದಲೇ ವಂಚನೆಗೊಳಗಾಗಿರುವ ಉಡುಪಿಯ ಸಾಂತೂರಿನ 84 ವರ್ಷದ ಮಹಿಳೆ ಸಿಲೆಸ್ಟಿನ್ ಅವರಿಗೆ ನ್ಯಾಯ ದೊರಕಿಸಲು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ನೆರವು ಕೇಳಿದ್ದು, ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಶಕಗಳ ಹಿಂದೆ ಸೆಲೆಸ್ಟಿನ್ 2 ಎಕರೆ ಜಮೀನು ಖರೀದಿಸಿ, ಮನೆ ನಿರ್ಮಾಣ ಮಾಡಿಕೊಂಡಿದ್ದರು. ಕೃಷಿ ಆದಾಯದಿಂದ ನಾಲ್ಕು ಮಕ್ಕಳನ್ನು ಸಾಕಿದ್ದರು. ಆಸ್ತಿಯನ್ನು ಎಲ್ಲರಿಗೂ ಸಮಪಾಲು ಹಂಚಿ ವಿಲ್ ಕೂಡ ಬರೆಸಿದ್ದರು. ಆದರೆ, ಅಜ್ಜಿಯ ಮೊಮ್ಮಗಳು ರೋಶನಿ 2 ಎಕರೆ ಆಸ್ತಿಯನ್ನು ಕುಟುಂಬ ಸದಸ್ಯರ ಅರಿವಿಗೂ ಬಾರದಂತೆ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.
‘ಈಚೆಗೆ ಪಂಚಾಯಿತಿ ಅಧಿಕಾರಿಗಳು ಕೃಷಿ ಸಮೀಕ್ಷೆಗೆ ಬಂದಾಗ ಮನೆ, ಜಮೀನಿನ
ಮಾಲೀಕತ್ವ ಹಿರಿಯ ಮಗ ರೋನಾಲ್ಡ್ ಅವರ ಪುತ್ರಿ ರೋಶನಿಯ ಹೆಸರಿನಲ್ಲಿರುವುದು ಬಯಲಾಗಿದೆ. 50 ವರ್ಷ ಸೆಲೆಸ್ಟಿನ್ ಹೆಸರಿನಲ್ಲಿದ್ದ ಹಕ್ಕುಪತ್ರದಲ್ಲಿ ರೋಶನಿ ಹೆಸರು ಸೇರಿದ್ದು ಹೇಗೆ, ಯಾವಾಗ ಬದಲಾಯಿತು ಎಂಬ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸಿ ವೃದ್ಧೆಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದರು. 2019ರ ಜನವರಿಯಲ್ಲಿ ರೊನಾಲ್ಡ್ ಹಾಗೂ ಅವರ ತಾಯಿ ಸೆಲೆಸ್ಟಿನ್ ಅವರಿಂದ ಹೆಬ್ಬೆಟ್ಟು ಹಾಗೂ ಸಹಿಯನ್ನು ಪಡೆದು ಆಸ್ತಿಯನ್ನು ರೋಷನಿ ಹೆಸರಿಗೆ ಬರೆಸಿಕೊಂಡಿದ್ದರು.
ಆಸ್ತಿ ಬದಲಾವಣೆಯಾಗಿರುವುದು ರೊನಾಲ್ಡ್ ಹಾಗೂ ಸೆಲೆಸ್ಟಿನ್ ಅವರ ಗಮನಕ್ಕೆ ಬಂದಿಲ್ಲ. ಇದು ವಂಚನೆಯಾಗಿದ್ದು, ಇದರ ವಿರುದ್ಧ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಹಿರಿಯ ನಾಗರಿಕರ ನ್ಯಾಯಾಲಯಕ್ಕೆ ದೂರು ನೀಡಲು ಸಿದ್ಧತೆ ನಡೆಸಿದ್ದೇನೆ ಎಂದರು.