ಕಂಬಳಕ್ಕೆ ಬ್ರಿಜ್‌ ಭೂಷಣ್‌‌ಗೆ ಆಹ್ವಾನ- ವ್ಯಾಪಕ ಟೀಕೆ: ಕೊನೆಕ್ಷಣದಲ್ಲಿ ಹೆಸರನ್ನು ಕೈಬಿಟ್ಟ ಸಮಿತಿ!

ಬೆಂಗಳೂರು: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಸಿಂಗ್‌ ಅವರನ್ನು ಬೆಂಗಳೂರು ಕಂಬಳಕ್ಕೆ ಅತಿಥಿಯನ್ನಾಗಿ ಆಹ್ವಾನಿಸಿರುವ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿರುವ ಪುತ್ತೂರಿನ ಕಾಂಗ್ರೆಸ್‌ ಶಾಸಕ ಹಾಗೂ ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್‌ ರೈ, ಬ್ರಿಜ್‌ ಭೂಷಣ್‌ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದಿದ್ದಾರೆ.

ಪುತ್ತೂರಿನ ಕಾಂಗ್ರೆಸ್‌ ಶಾಸಕ ಅಶೋಕ್‌ ರೈ ಅವರ ಅಧ್ಯಕ್ಷತೆಯ ಬೆಂಗಳೂರು ಕಂಬಳ ಸಮಿತಿಯ ನೇತೃತ್ವದಲ್ಲಿ ನಡೆಯುವ ಈ ಕಂಬಳಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಒಂದು ಕೋಟಿ ರೂ. ಧನ ಸಹಾಯ ಮಾಡಿತ್ತು. ಅದಾಗ್ಯೂ, ರಾಷ್ಟ್ರವ್ಯಾಪಿ ಗಮನ ಸೆಳೆದಿರುವ ಲೈಂಗಿಕ ಹಗರಣದ ಆರೋಪಿಯನ್ನು ಆಹ್ವಾನಿಸಿರುವುದು ಕಾಂಗ್ರೆಸ್‌ ಕಾರ್ಯಕರ್ತರಲ್ಲೇ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಕುರಿತು ಅಶೋಕ್ ರೈ ಪ್ರತಿಕ್ರಿಯೆ ನೀಡಿದ್ದು, “ಕಂಬಳ ಒಂದು ಕ್ರೀಡೆ. ಇದು ದೊಡ್ಡ ಕಾರ್ಯಕ್ರಮ. ಇದರಲ್ಲಿ ಕಾಂಗ್ರೆಸ್-ಬಿಜೆಪಿ ಎಂದು ರಾಜಕೀಯ ಇಲ್ಲ. ಬ್ರಿಜ್‌ ಭೂಷಣ್‌ ಆಹ್ವಾನಕ್ಕೆ ಸಿದ್ದಿ ಜನಾಂಗದವರು ಬಂದು ಕೋರಿದ್ದರು. ಆದರೆ, ಅವರು ಮೊನ್ನೆಯೇ ನಾನು ಕಾರ್ಯಕ್ರಮಕ್ಕೆ ಬರೋದಿಲ್ಲ ಅಂತ ಹೇಳಿದ್ದಾರೆ. ಆಹ್ವಾನ ಪತ್ರಿಕೆಯನ್ನು ಕೂಡ ನಾವು ಬದಲು ಮಾಡುತ್ತೇವೆ” ಎಂದಿದ್ದಾರೆ.

ನ.25ರಂದು ನಡೆಯಬೇಕಿದ್ದ ಸಭಾ ಕಾರ್ಯಕ್ರಮದಲ್ಲಿ ಕುಸ್ತಿಪಟುಗಳನ್ನು ಸನ್ಮಾನಿಸಲು ಸಂಸದ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲಾಗಿತ್ತು. ಬ್ರಿಜ್ ಭೂಷಣ್ ಅವರು ಕುಡುಬಿ ಮತ್ತು ಸಿದ್ದಿ ಜನಾಂಗದವರಿಗೆ ಗೋವಾದಲ್ಲಿ ಕುಸ್ತಿ ತರಬೇತಿ ನೀಡಿದ್ದರು, ಈ ಸೇವೆಯನ್ನು ಪರಿಗಣಿಸಿ ಕಂಬಳಕ್ಕೆ ಆಹ್ವಾನ ನೀಡಲಾಗಿತ್ತು ಎಂದು ಕಂಬಳ ಸಮಿತಿಯ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!