ಅಸಂಘಟಿತ ವಲಯದ ಶೇ.85 ಮಂದಿಗೆ ಸಾಮಾಜಿಕ ಭದ್ರತೆ ನೀಡುವುದು ಸರಕಾರದ ನಿಲುವು- ಸಂತೋಷ್ ಲಾಡ್
ಉಡುಪಿ: ರಾಜ್ಯದಲ್ಲಿ ರೆಮ್ಯಾಟೋ, ಸ್ವಿಗ್ಗಿ, ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ಆನ್‌ಲೈನ್ ಪ್ಲಾಟ್‌ಫಾರ್ಮ್ ಗಳಿಗೆ ಸೇವೆ ಸಲ್ಲಿಸುವ ಗಿಗ್ ಕಾರ್ಮಿಕರಿಗೆ ಭದ್ರತೆ ಒದಗಿಸಲು ವಿಶೇಷ ಕಾನೂನು ತರಲಾಗುತ್ತಿದ್ದು, ರಾಜಸ್ಥಾನ ಮಾದರಿಗೆ ಸುಧಾರಣೆ ತಂದು ಮಸೂದೆ ಮಂಡಿಸಲು ಪ್ರಯತ್ನ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ಕಾಂಗ್ರೆಸ್ ಭವನದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು. ಇದಕ್ಕೆ ಮುಖ್ಯಮಂತ್ರಿಗಳು ಈಗಾಗಲೇ ಹಣ ಬಿಡುಗಡೆ ಮಾಡಿದ್ದಾರೆ. ಒಂದೆರಡು ತಿಂಗಳಲ್ಲಿ ಇದಕ್ಕೆ ನೀತಿ ನಿಯಮ ರೂಪಿಸಲಾಗುವುದು . ಅವರಿಂದ ಆನ್‌ಲೈನ್ ನೋಂದಣಿ ಮಾಡಿಸಿ ಕೊಳ್ಳುತ್ತೇವೆ. ಇದರಿಂದ ಅಂದಾಜು 4 ರಿಂದ 5 ಲಕ್ಷ ಗಿಗ್ ಕಾರ್ಮಿಕರಿಗೆ ಅನುಕೂಲವಾಗಲಿದೆ. ಸದ್ಯ ಕಾನೂನು ಸಲಹೆ ಪಡೆಯಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಅಸಂಘಟಿತ ವಲಯದಲ್ಲಿರುವ ಶೇ.85 ಮಂದಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂಬುದು ನಮ್ಮ ಸರಕಾರದ ನಿಲುವು ಆಗಿದೆ. ರಾಜ್ಯದಲ್ಲಿ 43 ಕ್ಷೇತ್ರಗಳಲ್ಲಿ ಒಟ್ಟು 1ಕೋಟಿ 80ಲಕ್ಷ ಮಂದಿ ಅಸಂಘಟಿತ ಕಾರ್ಮಿಕರು ಇದ್ದಾರೆ. ಇವರಿಗೆಲ್ಲ ಸಾಮಾಜಿಕ ಭದ್ರತೆ ಒದಗಿಸುವ ಮಸೂದೆಯನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಸಾರಿಗೆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅನೂಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಾರಿಗೆಯಿಂದ ಹೆಚ್ಚುವರಿ ಸೆಸ್ ಸಂಗ್ರಹಿಸಿ ಸಾರಿಗೆ ಮಂಡಳಿಯನ್ನು ಸ್ಥಾಪಿಸಲಾಗುವುದು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹಾಗೂ ನಾನು ಸರಕಾರಕ್ಕೆ ಮನವಿ ಮಾಡಿದ್ದೇವೆ. ಅದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಾರಿಗೆ ಕ್ಷೇತ್ರದಲ್ಲಿ ಕಮರ್ಷಿಯಲ್ ಪರವಾನಿಗೆ ಹೊಂದಿರುವ ರಿಕ್ಷಾ, ಲಾರಿ, ಟೆಂಪೋ ಚಾಲಕರು, ಕ್ಲಿನರ್ಸ್, ವರ್ಕ್ಸ್ ಶಾಪ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ 50ಲಕ್ಷ ಮಂದಿಗೆ ನೆರವು ನೀಡುವ ಕಾರ್ಯ ಮಾಡಲಾಗುವುದು ಎಂದು ಅವರು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಮಂಡಿಸಿದ ಹಿಂದು ಕೋಡ್ ಬಿಲ್‌ಗೆ ವಿರೋಧ ವ್ಯಕ್ತಪಡಿಸಿದ್ದ ಆರ್‌ಎಸ್‌ಎಸ್‌ಗೆ ಈಗ ಹಿಂದುಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಹಿಂದೂ ಕೋಡ್ ಬಿಲ್‌ನಿಂದ ಮಹಿಳೆಯರಿಗೆ ಆಸ್ತಿ ಹಕ್ಕು ದೊರೆತಿದೆ ಮತ್ತು ಹಿಂದುಗಳೆಲ್ಲ ಕಾನೂನಿನಲ್ಲಿ ಸಮಾನವಾಗಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಎಂ.ಎ.ಗಫೂರ್, ದಿನೇಶ್ ಹೆಗ್ಡೆ ಮೊಳಹಳ್ಳಿ, ದಿನೇಶ್ ಪುತ್ರನ್, ರಮೇಶ್ ಕಾಂಚನ್, ಜ್ಯೋತಿ ಹೆಬ್ಬಾರ್, ಗೀತಾ ವಾಗ್ಳೆ, ಹರೀಶ್ ಕಿಣಿ, ಬಿಪಿನ್ ಚಂದ್ರಪಾಲ್ ನಕ್ರೆ, ಭುಜಂಗ ಶೆಟ್ಟಿ, ದಿನಕರ ಹೇರೂರು ಮೊದಲಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕುಶಲ್ ಶೆಟ್ಟಿ ಸ್ವಾಗತಿಸಿದರು. ಭಾಸ್ಕರ್ ರಾವ್ ಕಿದಿಯೂರು ವಂದಿಸಿದರು. ಅಣ್ಣಯ್ಯ ಸೇರಿಗಾರ್ ಕಾರ್ಯ ಕ್ರಮ ನಿರೂಪಿಸಿದರು.