ದೌರ್ಜನ್ಯಕ್ಕೊಳಗಾದ ಮಹಿಳೆ ಹಾಗೂ ಮಕ್ಕಳಿಗೆ ಅಗತ್ಯ ನೆರವು ನೀಡಿ: ಜಿಲ್ಲಾಧಿಕಾರಿ
ಉಡುಪಿ: ಸಮಾಜದಲ್ಲಿ ನೊಂದ ನಿರ್ಗತಿಕ, ದೌರ್ಜನ್ಯಕ್ಕೊಳಗಾಗಿ ಸಂಕಷ್ಟದಲ್ಲಿರುವ
ಮಹಿಳೆಯರು ಹಾಗೂ ಮಕ್ಕಳಿಗೆ ಸಾಂತ್ವನ ಹೇಳುವುದರ ಜೊತೆಗೆ ಆಶ್ರಯ ನೀಡಿ ಕಾನೂನಿನ ನೆರವನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದರು.
ಅವರು ಇಂದು ತಮ್ಮ ಕಛೇರಿ ಸಭಾಂಗಣದಲ್ಲಿ ಸಾಂತ್ವನ ಯೋಜನೆ, ಕೌಟುಂಬಿಕ ಹಿಂಸೆ, ಮಹಿಳೆಯರ ರಕ್ಷಣೆ, ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆ, ಬಾಲ್ಯವಿವಾಹ ನಿಷೇಧ, ಮಾದಕ ವಸ್ತುಗಳ ಸೇವನೆ ನಿಷೇಧ ಹಾಗೂ ಸಖಿ ಒನ್ ಸ್ಟಾಪ್
ಸೆಂಟರ್‌ಗಳ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ದುರ್ಬಲರಾದ ಮಹಿಳೆ ಮತ್ತು ಮಕ್ಕಳ ಮೇಲೆ ಶೋಷಣೆ ಹಾಗೂ ದೌರ್ಜನ್ಯವನ್ನು ತಡೆಯಲು ಸರಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಇವುಗಳ ಬಗ್ಗೆ ಅವರಿಗೆ ಅರಿವು ಮೂಡಿಸುವುದರೊಂದಿಗೆ ನೊಂದವರಿಗೆ ಸಾಂತ್ವನ
ಹೇಳುವುದರ ಜೊತೆಗೆ ಆಶ್ರಯ ಒದಗಿಸಿ, ಧರ‍್ಯ ತುಂಬಿ ಅಗತ್ಯ ನೆರವುಗಳನ್ನು ಕಲ್ಪಿಸಬೇಕು ಎಂದರು.ಸಾ0ತ್ವನ ಕೇಂದ್ರಗಳಿಗೆ ಕಳೆದ ಡಿಸೆಂಬರ್‌ನಿoದ ಈವರೆಗೆ ಜಿಲ್ಲೆಯಲ್ಲಿ 187 ಪ್ರಕರಣಗಳು ದಾಖಲಾಗಿದ್ದು, ಹಳೆಯ ಬಾಕಿ ಸೇರಿ 401 ಪ್ರಕರಣಗಳಿದ್ದು ಅವುಗಳಲ್ಲಿ 180 ಪ್ರಕರಣಗಳು ಇತ್ಯಾರ್ಥವಾಗಿವೆ. 165 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು, 56
ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ ಎಂದ ಅವರು ಬಾಕಿ ಉಳಿದ ಪ್ರಕರಣಗಳನ್ನು ಸಮಾಲೋಚನೆ ನಡೆಸುವುದರೊಂದಿಗೆ ಶೀಘ್ರವಾಗಿ ಇತ್ಯಾರ್ಥ ಗೊಳಿಸಬೇಕೆಂದು ಸೂಚನೆ ನೀಡಿದರು.
ಫೋಕ್ಸೊ ಕಾಯ್ದೆಯಡಿ ಪ್ರಸ್ತುತ ಸಾಲಿನಲ್ಲಿ 33 ಪ್ರಕರಣಗಳು ದಾಖಲಾಗಿದ್ದು, ಈಗಾಗಲೇ 22 ಪ್ರಕರಣಗಳನ್ನು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿದೆ. ಇನ್ನೂ 11 ಪ್ರಕರಣಗಳು ತನಿಖಾ ಹಂತದಲ್ಲಿದೆ ಎಂದರು ಗ್ರಾಮ ಪಂಚಾಯತ್ ಮಟ್ಟದಲ್ಲಿ ರಚಿಸಲಾಗಿರುವ ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ, ಬಾಲ್ಯವಿವಾಹ ನಿಷೇಧ ಸೇರಿದಂತೆ ಸಮಗ್ರ ಮಕ್ಕಳ ರಕ್ಷಣೆ ಸಮಿತಿಗಳು ಪ್ರತೀ 3 ತಿಂಗಳಿಗೊಮ್ಮೆ ಸಭೆ ನಡೆಸಿ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಯಾವುದೇ ಪ್ರಕರಣಗಳು ಆಗದಂತೆ ಎಚ್ಚರವಹಿಸಬೇಕು ಎಂದರು. ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಉದ್ಯೋಗ ಹರಸಿ ಬಂದ ಕಾರ್ಮಿಕರು, ವಾಸಿಸುವ ಸ್ಥಳಗಳಲ್ಲಿ ಬಾಲ್ಯವಿವಾಹ ಪ್ರಕರಣಗಳು ಕಂಡು ಬರುತ್ತಿವೆ, ಈ ಬಗ್ಗೆ ಎಚ್ಚರವಹಿಸಬೇಕು. ಅಲ್ಲಿ ಮಹಿಳೆಯರಿಗೆ ತೊಂದರೆ ಯಾಗುತ್ತಿರುವ ಸಾಧ್ಯತೆಗಳು ಹೆಚ್ಚು ಇರುವುದರಿಂದ ಪೊಲೀಸ್ ಬೀಟ್‌ನ್ನು ಆ ಪ್ರದೇಶದಲ್ಲಿ ಹೆಚ್ಚಿಸಬೇಕು ಎಂದರು.
ಹೊರದೇಶಗಳಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುವುದಾಗಿ ವಂಚನೆ ಮಾಡುವ ಅನಧೀಕೃತವಾಗಿ ಕಾರ್ಯನಿರ್ವಹಿಸುವ ಏಜೆನ್ಸಿಗಳ ಬಗ್ಗೆ ಪೊಲೀಸ್ ಇಲಾಖೆ ಪತ್ತೆ ಹಚ್ಚಿ ಕಾನೂನಿನಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ವಿವಿಧ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸುತ್ತಿರುವ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳಗಳು ಆಗದಂತೆ ನೋಡಿಕೊಳ್ಳಬೇಕು. ಲೈಂಗಿಕ ಕಿರುಕುಳಕ್ಕೆ ಒಳಗಾಗಿ ತೊಂದರೆಯಾದಗ ಯಾರನ್ನು ಸಂಪರ್ಕಿಸಿ ಕಾನೂನಿನ ನೆರವು ಪಡೆಯಬೇಕು ಎನ್ನುವುದರ ಬಗ್ಗೆ ಅರಿವು ಮೂಡಿಸುವ ಕರ‍್ಯಾಗಾರಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆಯ 29 ಪ್ರಕರಣಗಳು ದಾಖಲಾಗಿದ್ದು, 67 ಜನರನ್ನು ಬಂಧಿಸಲಾಗಿದೆ, ಹೆಚ್ಚಾಗಿ ಗಾಂಜಾ ಪ್ರಕರಣಗಳಾಗಿವೆ, 207 ಜನರ ಮೇಲೆ ಮಾದಕ ವಸ್ತುಗಳ ಸೇವನೆ ಕೇಸುಗಳನ್ನು ಹಾಕಲಾಗಿದೆ. ಎಂದ ಅವರು ಔಷಧಿ ಅಂಗಡಿಗಳಲ್ಲಿ ಅನಧೀಕೃತವಾಗಿ ವೈದ್ಯರ ಸಲಹೆ ಇಲ್ಲದೇ ಯಾವುದೇ ನ್ಯೂರೋಟಿಕ್ ಡ್ರಗ್ಸ್ಗಳನ್ನು ವಿತರಿಸಬಾರದು, ತಪ್ಪಿದ್ದಲ್ಲಿ ಅಂತಹ ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದರು.
ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಶಿಕ್ಷಣ ಇಲಾಖೆಯು ನೋಡಿಕೊಳ್ಳಬೇಕು. 8 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಬರುವುದನ್ನು ಬಿಟ್ಟಾಗ ಆ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಬೇಕೆಂದು ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ವೈ ನವೀನ್ ಭಟ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶೋಭಾ ಜಿ ಪುತ್ರನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಶೇಷಪ್ಪ ಆರ್, ಡಿಎಚ್‌ಒ ಸುಧೀರ್ ಚಂದ್ರ ಸೂಡ, ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.