ಮಾಧ್ಯಮ, ಪ್ರಮುಖ ಸಂಸ್ಥೆಗಳಿಗೆ ಮುಕ್ತ ಹಸ್ತ ನೀಡಿದರೆ ಮೋದಿ ಸರ್ಕಾರ ಉಡೀಸ್: ರಾಹುಲ್ ಗಾಂಧಿ
ಪಟಿಯಾಲ: ದುರ್ಬಲ ಪ್ರತಿಪಕ್ಷದಿಂದಾಗಿಯೇ ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮಾಧ್ಯಮಗಳು ಮತ್ತು ಪ್ರಮುಖ ಸಂಸ್ಥೆಗಳಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದರೆ ನರೇಂದ್ರ ಮೋದಿ ಸರ್ಕಾರ ಪತನಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಯಾವುದೇ ದೇಶದಲ್ಲಿ ಜನರ ಧ್ವನಿಯನ್ನು ರಕ್ಷಿಸುವ ಮಾಧ್ಯಮಗಳು, ನ್ಯಾಯಾಂಗ ವ್ಯವಸ್ಥೆ ಮತ್ತು ಸಂಸ್ಥೆಗಳು ಸೇರಿದಂತೆ ಪ್ರತಿಪಕ್ಷ ಒಂದು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತವೆ ಎಂದಿರುವ ಅವರು, ‘ಭಾರತದಲ್ಲಿ ಇಡೀ ಕಾರ್ಯಚೌಕಟ್ಟನ್ನು ಬಿಜೆಪಿ ಸರ್ಕಾರ ನಿಯಂತ್ರಿಸಿದೆ ಮತ್ತು ವಶಕ್ಕೆ ತೆಗೆದುಕೊಂಡಿದೆ. ಜನರಿಗೆ ಧ್ವನಿ ನೀಡಲು ವಿನ್ಯಾಸಗೊಳಿಸಲಾದ ಸಂಪೂರ್ಣ ವಾಸ್ತುಶಿಲ್ಪವನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
‘ಮುಕ್ತ ಮಾಧ್ಯಮ ಮತ್ತು ಸ್ವತಂತ್ರ ಸಂಸ್ಥೆಗಳನ್ನು ನನಗೆ ನೀಡಿ. ಈ (ನರೇಂದ್ರ ಮೋದಿ) ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅವರು ಸವಾಲು ಹಾಕಿದ್ದಾರೆ.
ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ನಲ್ಲಿ ‘ಖೇತಿ ಬಚಾವೊ’ ಯಾತ್ರೆಯ ಮೂರನೇ ಮತ್ತು ಅಂತಿಮ ದಿನದಂದು ನಡೆದ ಸುದ್ದಿಗೋಷ್ಠಿಯಲ್ಲಿ , ‘ಮೋದಿ ಸರ್ಕಾರ ಎಲ್ಲಾ ಪ್ರಮುಖ ಸಂಸ್ಥೆಗಳ ಮೇಲೆ ಬಲವಂತವಾಗಿ ಹಿಡಿತ ಸಾಧಿಸಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ.