ನನ್ನ ಹೆಸರನ್ನು ಕೇಳಿದರೆ ಪ್ರಧಾನಿ ಮೋದಿಗೆ ಭಯ: ಸಿಎಂ ಸಿದ್ದರಾಮಯ್ಯ
ಮೈಸೂರು: ಕರ್ನಾಟಕ ಮತ್ತು ಸಿದ್ದರಾಮಯ್ಯ ಅಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಭಯ. ಹಾಗಾಗಿ ಅವರು ಪದೇ ಪದೇ ಕರ್ನಾಟಕದ ಬಗ್ಗೆ ಮಾತನಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಅವರು ಕರ್ನಾಟಕ ವಿಚಾರ ಪ್ರಸ್ತಾಪಿಸುತ್ತಿ ದ್ದಾರೆ. ಅವರಿಗೆ ಕರ್ನಾಟಕ ಮತ್ತು ಸಿದ್ಧರಾಮಯ್ಯ ಅಂದರೆ ಭಯ ಎಂದು ಹೇಳಿದರು.
ಮೋದಿ ಅವರು ಐದು ಗ್ಯಾರಂಟಿಗಳನ್ನು ವಿರೋಧ ಮಾಡಿದರು. ದೇಶ ದಿವಾಳಿಯಾಗುತ್ತದೆ ಎಂದು ಟೀಕಿಸಿದರು. ಈಗ ವಿಕಸಿತ್ ಭಾರತ್ ಯಾತ್ರೆಯಲ್ಲಿ ಪ್ರಧಾನ ಮಂತ್ರಿ ಗ್ಯಾರಂಟಿ ಎಂದು ಬರೆಸಿದ್ದಾರೆ. ಎಲ್ಲ ರಾಜ್ಯಗಳ ಚುನಾವಣೆಯಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ದಾರೆ ಎಂದರು.
ಇವತ್ತು ಐದು ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ನಡೆದಿದೆ. ತೆಲಂಗಾಣದಲ್ಲಿ ಮಾತ್ರ ಪ್ರಚಾರದಲ್ಲಿ ಭಾಗವಹಿಸಿದ್ದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ತಾನ, ಛತ್ತಿಸಗಡದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಇದು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.
ಜನವರಿ 22 ಅಯೋಧ್ಯೆ ರಾಮಮಂದಿರ ಉದ್ಘಾಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಹಳ ವರ್ಷಗಳ ವಿವಾದ ಮುಗಿದು ನ್ಯಾಯಾಲಯದ ನಿರ್ದೇಶನದಂತೆ ದೇಗುಲ ನಿರ್ಮಿಸಲಾಗಿದೆ. ದೇಗುಲ ಉದ್ಘಾಟನೆಯಿಂದಲೇ ಮತದಾರರು ಬದಲಾಗುತ್ತಾರೆ ಎನ್ನುವುದು ಸರಿಯಲ್ಲ ಎಂದರು.