ಗ್ರಾಹಕರ ಖಾತೆಗೆ ತಪ್ಪಾಗಿ 820 ಕೋಟಿ ರೂ.ಪಾವತಿಸಿದ ಬ್ಯಾಂಕ್!
ಹೊಸದಿಲ್ಲಿ: ಯೂಕೊ ಬ್ಯಾಂಕ್ ಗ್ರಾಹಕರ ಖಾತೆಗಳಿಗೆ ತಪ್ಪಾಗಿ 820 ಕೋಟಿ ರೂಪಾಯಿಗಳನ್ನು ಪಾವತಿಸಿರುವ ಸ್ವಾರಸ್ಯಕರ ಪ್ರಕರಣ ಬೆಳಕಿಗೆ ಬಂದಿದೆ. ಇದು ಪ್ರಮಾದವಶಾತ್ ಆಗಿ ಸಂಭವಿಸಿದ್ದು, ಈ ಖಾತೆಗಳಿಂದ ಹಣವನ್ನು ವಾಪಾಸು ಪಡೆಯುವ ಪ್ರಕ್ರಿಯೆ ಮುಂದುವರಿದಿದೆ ಎಂದು ಬ್ಯಾಂಕ್ ಹೇಳಿದೆ.
ತಕ್ಷಣದ ಪಾವತಿ ಸೇವೆ (ಐಎಂಪಿಎಸ್) ಮೂಲಕ ಬ್ಯಾಂಕ್ ಖಾತೆಗಳಿಗೆ ತಪ್ಪಾಗಿ ಪಾವತಿಯಾಗಿದ್ದ ಮೊತ್ತದಲ್ಲಿ ಶೇಕಡ 79ರಷ್ಟು ಅಂದರೆ 649 ಕೋಟಿ ರೂಪಾಯಿಗಳನ್ನು ಮತ್ತೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಪ್ಪಾಗಿ ಹಣ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದ ತಕ್ಷಣವೇ ಕ್ರಮಗಳನ್ನು ಕೈಗೊಂಡು ಹಣ ಸ್ವೀಕರಿಸಿದ ಖಾತೆದಾರರ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. ಈ ಮೂಲಕ 820 ಕೋಟಿ ರೂಪಾಯಿಯ ಪೈಕಿ 649 ಕೋಟಿ ರೂಪಾಯಿಗಳನ್ನು ವಾಪಾಸು ಪಡೆಯಲಾಗಿದೆ ಎಂದು ಬ್ಯಾಂಕ್ ಗುರುವಾರ ನಿಯಂತ್ರಣ ಸಂಸ್ಥೆಗೆ ಸಲ್ಲಿಸಿದ ವರದಿಯಲ್ಲಿ ವಿವರಿಸಿದೆ. ಅದರೆ ಇದಕ್ಕೆ ತಾಂತ್ರಿಕ ದೋಷ ಕಾರಣವೇ, ಸಿಬ್ಬಂದಿಯಿಂದ ಆದ ಪ್ರಮಾದವೇ ಅಥವಾ ಹ್ಯಾಕಿಂಗ್ ಪ್ರಯತ್ನವೇ ಎಂಬ ಬಗ್ಗೆ ಇನ್ನೂ ಈ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ವಿವರಣೆ ನೀಡಿಲ್ಲ.
ಐಎಂಪಿಎಸ್ ಪ್ಲಾಟ್ಫಾರಂ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ನಿರ್ವಹಿಸುತ್ತದೆ. ಐಎಂಪಿಎಸ್ ಎನ್ನುವುದು ರಿಯಲ್ ಟೈಮ್ ಅಂತರ ಬ್ಯಾಂಕಿಂಗ್ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ ವ್ಯವಸ್ಥೆಯಾಗಿದ್ದು, ಯಾವುದೇ ಹಸ್ತಕ್ಷೇಪವಿಲ್ಲದೇ ಹಣ ನೇರವಾಗಿ ವರ್ಗಾಯಿಸುವ ವಿಧಾನವಾಗಿದೆ.