ನ್ಯೂಜಿಲ್ಯಾಂಡ್ ವಿರುದ್ಧ ಅಮೋಘ 70 ರನ್ಗಳ ಜಯದೊಂದಿಗೆ ಫೈನಲ್ಗೆ ಲಗ್ಗೆ ಇಟ್ಟ ಭಾರತ
ಮುಂಬಯಿ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ನಡೆದ ಸೆಮಿಫೈನಲ್ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಅದ್ಭುತ ಹೋರಾಟ ಸಂಘಟಿಸಿ ಜಯ ಸಾಧಿಸಿದ ಭಾರತ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.
ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ನೀಡಿದ 398 ರನ್ ಗುರಿ ಬೆನ್ನಟ್ಟಿದ ಕಿವೀಸ್ ಗೆ ವೇಗಿ ಮೊಹಮ್ಮದ್ ಶಮಿ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾದರು. ಮೊದಲ ಎಸೆತದಲ್ಲೇ ಡೆವೊನ್ ಕಾನ್ವೆ (13 ರನ್) ಅವರನ್ನು ವಿಕೆಟ್ ಕೀಪರ್ ರಾಹುಲ್ ಕೈಗೆ ಕ್ಯಾಚಿತ್ತು ನಿರ್ಗಮಿಸುವಂತೆ ಮಾಡಿದರು. ರಚಿನ್ ರವೀಂದ್ರ (13 ರನ್) ಅವರನ್ನು ಮುಂದಿನ ಓವರ್ ನಲ್ಲಿ ಅದೇ ರೀತಿ ರಾಹುಲ್ ಕೈಗೆ ಕ್ಯಾಚಿತ್ತು ಪೆವಿಲಿಯನ್ ಗೆ ಮರಳುವಂತೆ ಮಾಡಿದರು . ಆರಂಭಿಕ ಆಘಾತಕ್ಕೆ ಸಿಲುಕಿದ ಬಳಿಕ ಕೇನ್ ವಿಲಿಯಮ್ಸನ್ (69 ರನ್) ಮತ್ತು ಡೆರಿಲ್ ಮಿಚೆಲ್ ಅಮೋಘ ಜತೆಯಾಟವಾಡಿ ಭಾರತದ ಬೌಲರ್ ಗಳನ್ನು ಕಾಡಿದರು. ಮಿಚೆಲ್ ಅಮೋಘ ಶತಕ ಸಿಡಿಸಿ ಪಂದ್ಯದ ತಿರುವಿನ ಸೂಚನೆ ನೀಡುವಂತೆ ಕಂಡು ಬಂದರು. 119 ಎಸೆತಗಳಲ್ಲಿ 134 ರನ್ ಗಳಿಸಿ ಔಟಾದರು. ಗ್ಲೆನ್ ಫಿಲಿಪ್ಸ್ 41 ರನ್ ಗಳಿಸಿ ಔಟಾದರು. ನಡೆಸಿ ಮಾರ್ಕ್ ಚಾಪ್ಮನ್ 2, ಮಿಚೆಲ್ ಸ್ಯಾಂಟ್ನರ್ 9, ಟ್ರೆಂಟ್ ಬೌಲ್ಟ್ 2, ಲಾಕಿ ಫರ್ಗುಸನ್ 6 ರನ್ ಗಳಿಸಿದರು.
ಭಾರತದ ಬೌಲರ್ ಗಳು ಸ್ವಲ್ಪ ದುಬಾರಿಯಾದರೂ ಶಮಿ ಬಿಗಿ ದಾಳಿ ನಡೆಸಿ 7 ವಿಕೆಟ್ ಕಬಳಿಸಿ ಹೊಸ ದಾಖಲೆ ಬರೆದರು. 9.5 ಓವರ್ ಗಳಲ್ಲಿ 57 ರನ್ ಮಾತ್ರ ಬಿಟ್ಟು ಕೊಟ್ಟರು. ಹಾರ್ದಿಕ್ ಪಾಂಡ್ಯ ಅವರ ಬದಲಿಗೆ ತಂಡಕ್ಕೆ ಪ್ರವೇಶ ಮಾಡಿದ ಶಮಿ ಮೋಡಿ ಮಾಡಿದರು. 5 ಪಂದ್ಯಗಳಲ್ಲಿ 23 ವಿಕೆಟ್ ಪಡೆದು ಈ ವಿಶ್ವಕಪ್ ನ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಇದು 2019 ರ ವಿಶ್ವಕಪ್ ನ ಸೆಮಿಫೈನಲ್ ನಲ್ಲಿ ಭಾರತವನ್ನು ನ್ಯೂಜಿಲ್ಯಾಂಡ್ ಸೋಲಿಸಿತ್ತು, ಆ ಸೇಡು ತೀರಿಸಿಕೊಂಡಂತಾಗಿದೆ.