ಮಧುಮೇಹ ದಿನ: ನೀಲಿ ಬಣ್ಣದಿಂದ ಕಂಗೊಳಿಸಿದ ಮಲ್ಪೆ ಗಾಂಧಿ ಪ್ರತಿಮೆ

ಉಡುಪಿ, ನ.15: ವಿಶ್ವದಾದ್ಯಂತ ವಯೋಮಿತಿಯ ನಿರ್ಬಂಧವಿಲ್ಲದೇ ವ್ಯಾಪಕವಾಗಿ ಹರಡುತ್ತಿರುವ ಮಧುಮೇಹದ ಬಗ್ಗೆ ವಿಶ್ವ ಮಧುಮೇಹ ದಿನದ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನ.14ರ ರಾತ್ರಿ ಮಲ್ಪೆ ಕಡಲ ಕಿನಾರೆಯಲ್ಲಿರುವ ಗಾಂಧಿ ಪ್ರತಿಮೆಯನ್ನು ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯ ಎಂಡೋಕ್ರಿನೊಲೊಜಿ (ಅಂತಃ ಸ್ರಾವಶಾಸ್ತ್ರ) ವಿಭಾಗದ ವತಿಯಿಂದ ನೀಲಿ ದೀಪಗಳಿಂದ ಬೆಳಗಿಸಲಾಯಿತು.

ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು, ಮಧುಮೇಹ ತಡೆಗಟ್ಟಲು ಹಾಗೂ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದು ಕೊಳ್ಳಲು ಪ್ರಪಂಚ ದಾದ್ಯಂತ ನವೆಂಬರ್‌14ನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ.

ಈ ಹಿನ್ನೆಲೆಯಲಿ ಮಣಿಪಾಲದ ಕೆಎಂಸಿ ಆಸ್ಪತ್ರೆ ಜಿಲ್ಲೆಯ ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು, ರಜಾ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಸೇರಿದ ಮಲ್ಪೆ ಬೀಚ್‌ನ ಗಾಂಧಿ ಸ್ಮಾರಕ ವನ್ನು ನೀಲಿ ದೀಪಗಳಿಂದ ಬೆಳಗಲಾಯಿತು. ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ನೀಲಿ ಬಣ್ಣವನ್ನು ನೀಲಿ ವೃತ್ತದ ಚಿಹ್ನೆಯಿಂದ ತೆಗೆದುಕೊಳ್ಳಲಾಗಿದೆ. ಈ ಚಿಹ್ನೆಯನ್ನು ಇಂಟರ್‌ನೇಷನಲ್ ಡಯಾಬಿಟಿಸ್ ಫೆಡರೇಶನ್ (ಐಡಿಎಫ್) ಮಧುಮೇಹಕ್ಕೆ ಪರಿಹಾರವನ್ನು ಕಂಡುಹಿಡಿಯಲು ಅಗತ್ಯವಾದ ಏಕತೆಯನ್ನು ಪ್ರತಿನಿಧಿಸುತ್ತದೆ.

ಕೆಎಂಸಿ ಎಂಡೋಕ್ರೈನಾಲಜಿ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ.ಸಹನಾ ಶೆಟ್ಟಿ ಮಾತನಾಡಿ, ಭಾರತದಲ್ಲಿ ಪ್ರತಿ ಹನ್ನೊಂದು ಜನರಲ್ಲಿ ಒಬ್ಬರು ಟೈಪ್ 2 ಡಯಾಬೆಟಿಸ್‌ನಿಂದ ಬಳಲುತ್ತಿದ್ದು, ಈ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಧುಮೇಹವು ಹೃದ್ರೋಗ, ಮೂತ್ರಪಿಂಡದ ಸಮಸ್ಯೆಗಳು, ವಯಸ್ಕರಲ್ಲಿ ಕಣ್ಣಿನ ಸಮಸ್ಯೆಗಳು, ನರಗಳ ಸಮಸ್ಯೆಗಳು ಮತ್ತು ಅಪಘಾತಕಾರಿಯಲ್ಲದ ಪಾದದ ಅಂಗಚ್ಛೇದನಗಳಿಗೆ ಪ್ರಮುಖ ಕಾರಣವಾಗಿದೆ ಎಂದರು.

ಟೈಪ್ 2 ಡಯಾಬಿಟಿಸ್ ಅನ್ನು ಆರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಚಿಕ್ಕ ವಯಸ್ಸಿನಿಂದಲೇ ದೈಹಿಕ ಚಟುವಟಿಕೆ ಮತ್ತು ನಿತ್ಯ ವ್ಯಾಯಾಮದ ಮೂಲಕ ತಡೆಗಟ್ಟಬಹುದು. ವೈದ್ಯರು ಸೂಚಿಸಿದ ಸೂಕ್ತವಾದ ಔಷಧಿಗಳನ್ನು ತೆಗೆದುಕೊಳ್ಳುವುದು ಮತ್ತು ನಿಯಮಿತವಾಗಿ ತಪಾಸಣೆಗೊಳಗಾಗುವ ಮೂಲಕ ರೋಗದಿಂದ ದೂರವಿರಬಹುದು ಎಂದರು.

ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಮಾತನಾಡಿ, ಈ ವರ್ಷದ ಘೋಷವಾಕ್ಯ ‘ನಾಳೆಯ ಆರೋಗ್ಯಕ್ಕಾಗಿ ಮಧುಮೇಹದ ಜಾಗೃತಿ’. ಮಧುಮೇಹ ಇರುವವರು ಮುಖ್ಯವಾಗಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಾಳುಗಳು, ರಾಗಿ, ಬೀಜಗಳು, ತೆಳ್ಳಗಿನ ಮಾಂಸ ಮತ್ತು ಕಡಿಮೆ ಕೊಬ್ಬಿನ ಆಹಾರವನ್ನು ಒಳಗೊಂಡಂತೆ, ಆರೋಗ್ಯಕರ ಪೋಷಕಾಂಶ ಯುಕ್ತ ಆಹಾರವನ್ನು ತಿನ್ನುವ ಮೂಲಕ ಇದರಿಂದಾಗುವ ತೊಂದರೆಗಳನ್ನು ತಡೆಯಬಹುದು ಹಾಗೂ ಗ್ಲುಕೋಸ್ ಅನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಬಹುದು ಎಂದರು.

ಉಚಿತ ಮಧುಮೇಹ ತಪಾಸಣೆ

ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಮಧುಮೇಹ ದಿನದ ಅಂಗವಾಗಿ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಬಸ್ ಚಾಲಕರು ಹಾಗೂ ನಿರ್ವಾಹಕರು ಅಲ್ಲದೇ ಸಾರ್ವಜನಿಕರಿಗೆ ಉಚಿತ ಮಧುಮೇಹ ತಪಾಸಣೆ ಕಾರ್ಯಕ್ರಮವನ್ನು ನ.16ರ ಗುರುವಾರ ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿರುವ ಟ್ಯಾಕ್ಸಿ ನಿಲ್ದಾಣದ ಬಳಿ ಬೆಳಿಗ್ಗೆ ಗಂಟೆ 8:00ರಿಂದ ಅಪರಾಹ್ನ 1:00ಗಂಟೆಯ ವರೆಗೆ ಹಮ್ಮಿಕೊಂಡಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!