ತಾಯಿ ಮಕ್ಕಳ ಹತ್ಯೆ ಪ್ರಕರಣ: ಹಂತಕನ ಪತ್ತೆಗೆ ವ್ಯಾಪಕ ಬಲೆ ಬೀಸಿದ ಪೊಲೀಸರು
ಉಡುಪಿ: ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಘಟನೆ ನಡೆದು ಮೂವತ್ತಾರು ತಾಸು ಕಳೆದರೂ ಆರೋಪಿಯ ಸುಳಿವು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಕೇವಲ ಹದಿನೈದರಿಂದ ಇಪ್ಪತ್ತು ನಿಮಿಷಗಳಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆಗೈದು ನೇಜಾರಿನಿಂದ ಸಂತೆಕಟ್ಟೆಗೆ ಬೈಕ್ನಲ್ಲಿ ಡ್ರಾಪ್ ತೆಗೆದುಕೊಂಡು, ಬಳಿಕ ರಿಕ್ಷಾದಲ್ಲಿ ಉಡುಪಿಯ ಕರಾವಳಿ ಬೈಪಾಸ್ಗೆ ಬಂದು ಅಲ್ಲಿಂದ ಮತ್ತೊಂದು ಅಪರಿಚಿತನ ಬೈಕ್ ಏರಿದ ಹಂತಕ ಉದ್ಯಾವರ ಟೊಯೋಟಾ ಶೋ ರೂಮ್ ತನಕ ಹೋಗಿರುವ ಸಿಸಿಟಿವಿಯ ದೃಶ್ಯಾವಳಿ ಪತ್ತೆಯಾಗಿದೆ. ಇದೇ ರೀತಿ ಪರಾರಿಯಾದ ಹಂತಕ ಸಿನಿಮೀಯ ರೀತಿ ತಪ್ಪಿಸಿಕೊಂಡಿದ್ದಾನೆ. ಇದೇ ಜಾಡು ಹಿಡಿದು ಪೊಲೀಸರು ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ವ್ಯಾಪಕ ಶೋಧ ಕಾರ್ಯನಡೆಸುತ್ತಿದ್ದಾರೆ.
ವಿವಿಧ ಆಯಾಮಗಳಲ್ಲಿ ತನಿಖೆ: ಇಂತಹ ಭೀಭತ್ಸ ಕೃತ್ಯ ಇದೇ ಮೊದಲು ಉಡುಪಿ ಜಿಲ್ಲೆಯಲ್ಲಿ ಆಗಿದ್ದು, ಜಿಲ್ಲೆಯ ಜನತೆ ಘೋರ ಕೃತ್ಯದ ಆಘಾತದಿಂದ ಇನ್ನೂ ಹೊರಬಂದಿಲ್ಲ.
ವಿವಿಧ ಆಯಾಮಗಳಲ್ಲಿ ತನಿಖೆ ಚುರುಕು.
ಆರೋಪಿ ನೇರವಾಗಿ ಮನೆಯ ಒಳಗೆ ಹೋಗಿ ಈ ಕೃತ್ಯ ಎಸೆಗ ಬೇಕಾದರೇ ಪರಿಚಯಸ್ಥನೆ ಇರಬೇಕು ಎನ್ನುವುದು ಕೂಡ ಪೊಲೀಸರ ಸಂದೇಹವಾಗಿದೆ. ಆದ್ದರಿಂದ ಮನೆಯವರೊಂದಿಗೆ ಹಂತಕ ಹಣಕಾಸಿನ ವ್ಯವಹಾರ ನಡೆಸಿದ್ದಾನೆ ಎಂದು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮತ್ತೊಂದೆಡೆ ಮಂಗಳೂರಿನ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿದ್ದ ಅಫ್ಸಾನ್ ಯಾವುದಾದರೂ ಸ್ಮಗ್ಲಿಂಗ್ ವ್ಯವಹಾರದ ಮಾಹಿತಿ ತನ್ನ ಉನ್ನತ ಅಧಿಕಾರಿಗಳಿಗೆ ನೀಡಿದ್ದರೋ ಎಂಬ ಇದೇ ವೈಷಮ್ಯದ ಹಿನ್ನೆಲೆಯಲ್ಲಿ ಯಾರೋ ಸುಫಾರಿ ಕಿಲ್ಲರ್ಗಳನ್ನು ಗೊತ್ತುಪಡಿಸಿ ಹತ್ಯೆಗೆ ಸಂಚು ರೂಪಿಸಿರುವ ಸಾಧ್ಯತೆಗಳಿವೇ ಎನ್ನುವ ದೃಷ್ಟಿಯಲ್ಲೂ ತನಿಖೆ ನಡೆಸುತ್ತಿದ್ದಾರೆ.
ಪ್ರೇಮ ನಿರಾಕರಣೆ ಬಗ್ಗೆಯೂ ತನಿಖೆ: ಗಗನಸಖಿ ಅಫ್ಸಾನ್ ಮತ್ತು ಆಕೆಯ ಸಹೋದರಿ ಅಯ್ನಾಜ್ ರಜೆ ಇದ್ದಾಗ ನೇಜಾರಿನ ಮನೆಗೆ ಬರುತ್ತಿದ್ದರು. ವಾರದ ಹಿಂದೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಕೂಡ ನಡೆದಿತ್ತು. ಆ ಸಂಭ್ರಮದಲ್ಲಿ ಅಫ್ಸಾನ್ಗೆ ಆಕೆಯ ಸ್ನೇಹಿತ ಉಂಗುರು ಕೂಡ ಧರಿಸಿದ್ದ ಎಂದು ತಿಳಿದುಬಂದಿದೆ.
ವಿದೇಶದಿಂದಲೇ ಸುಫಾರಿ ಕಿಲ್ಲರ್ನನ್ನು ಗೊತ್ತುಪಡಿಸಿ ಹತ್ಯೆ…?
ಹತ್ಯೆಗೈದ ವ್ಯಕ್ತಿ ಸುಮಾರು ಮೂವತ್ತೈದರಿಂದ ನಲ್ವತ್ತು ವರ್ಷದ ಸಾಧಾರಣ ಮೈಕಟ್ಟಿನ ವ್ಯಕ್ತಿಯಾಗಿದ್ದು, ಆತನ ಚಲನವಲನ ನೋಡುವಾಗ ಪರಿಣತಿ ಹೊಂದಿದ್ದ ಹಂತಕ ಎನ್ನುವ ಹಾಗೆ ಇದೆ. ಮನೆಯ ಯಜಮಾನ ನೂರ್ ಮಹಮ್ಮದ್ ವಿದೇಶದಿಂದ ಸೋಮವಾರ ಮನೆಗೆ ಬಂದಿದ್ದು, ಹೆಂಡತಿ ಮಕ್ಕಳ ಅಂತ್ಯಕ್ರಿಯೆ ನಡೆಸಿದ್ದಾರೆ, ಮಂಗಳವಾರ ನೂರ್ ಮಹಮ್ಮದ್ರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ರಚನೆ ಮಾಡಿರುವ ಐದು ಪೊಲೀಸ್ ತಂಡಗಳು ಹಣಕಾಸಿನ ವ್ಯವಹಾರ ಸೇರಿದಂತೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿವೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಈ ಪೊಲೀಸ್ ತಂಡಗಳು ಸಂಬಂಧಿಕರು, ಸ್ನೇಹಿತರು, ಪರಿಚಿತರು ಸೇರಿದಂತೆ ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿಯನ್ನು ಪಡೆದು ಕೊಳ್ಳುತ್ತಿವೆ. ಅದೇ ರೀತಿ ತಾಂತ್ರಿಕ ತಂಡಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದೆ ಎಂದು ಅವರು ಹೇಳಿದರು.
ಇರಿತಕ್ಕೆ ಒಳಗಾಗಿದ್ದ ವೃದ್ದೆ ಆಸ್ಪತ್ರೆಯಿಂದ ಡಿಸ್ಚಾರ್ಜ್
ಘಟನೆ ಸಮಯದಲ್ಲಿ ನೂರ್ ಮಹಮ್ಮದ್ ಅವರ ತಾಯಿ ಹಾಜಿರಾ (70) ಅವರ ಸೊಂಟದ ಭಾಗಕ್ಕೆ ಎರಡು ಬಾರಿ ಇರಿದಿದ್ದ ಹಂತಕ. ಇದರಿಂದ ಜೀವ ಭಯದಿಂದ ಶೌಚಾಲಯದ ಒಳಗೆ ಅವಿತು ಜೀವ ರಕ್ಷಿಸಿಕೊಂಡ ಹಾಜಿರಾ ಅವರನ್ನು ಪೊಲೀಸರು ಬಂದ ಬಳಿಕ ಶೌಚಾಲಯದ ಬಾಗಿಲು ಒಡೆದು ಅವರನ್ನು ರಕ್ಷಿಸಿಸಿ ಆಸ್ಪತ್ರೆಗೆ ದಾಖಾಲಿಸಲಾಗಿತ್ತು. ಇಂದು ಸಂಜೆ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಉಡುಪಿ: ಇಡೀ ಕರಾವಳಿಯನ್ನೇ ಬೆಚ್ಚಿ ಬೀಳಿಸಿದ ಉಡುಪಿಯ ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ ಬೆಳಕಿಗೆ ಬಂದ ಸುಮಾರು 30 ಗಂಟೆಗಳ ಬಳಿಕ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘಟನೆ ಸಂಬಂಧ ಹೇಳಿಕೆಯನ್ನು ಇಂದು ಸಂಜೆ ಪ್ರಕಟಿಸಿದ್ದಾರೆ.
ನೇಜಾರುವಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಅಮಾನುಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಘಟನೆ ಕುರಿತಂತೆ ಸೂಕ್ತ ತನಿಖೆ ಕೈಗೊಳ್ಳಲು ನಿರ್ದೇಶನ ನೀಡಿದ್ದೇನೆ. ಅಲ್ಲದೆ ಅವರಿಂದ ನಿರಂತರ ಮಾಹಿತಿ ಪಡೆಯುತ್ತಿದ್ದೇನೆ. ಪ್ರಕರಣ ಭೇದಿಸಲು 5 ತಂಡಗಳನ್ನು ರಚಿಸಲಾಗಿದ್ದು, ಶೀಘ್ರ ಪತ್ತೆ ಮಾಡುವ ವಿಶ್ವಾಸವನ್ನು ಪೊಲೀಸ್ ವರಿಷ್ಠಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಮುಸ್ಲಿಂ ಜಮಾಅತ್: ನೇಜಾರುನಲ್ಲಿ ನಡೆದ ಅಮಾನವೀಯ ಘಟನೆಯು ಮನುಷ್ಯ ಸಮಾಜವನ್ನು ನಾಚಿಸುವ ಕೃತ್ಯವಾಗಿದ್ದು ಇದರ ಬಗ್ಗೆ ಅತೀ ಶೀಘ್ರವಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಆರೋಪಿಗಳನ್ನು ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು ಹಾಗೂ ಯಾವುದೇ ವಕೀಲರು ಇಂತಹ ದುಷ್ಕರ್ಮಿಗಳ ಪರವಾಗಿ ವಾದಿಸಬಾರದಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಬಿಎಸ್ಎಫ್ ರಫೀಕ್ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್. ಸುಭಾನ್ ಅಹ್ಮದ್ ಹೊನ್ನಾಳ ಆಗ್ರಹಿಸಿದ್ದಾರೆ.
ಸಾಲಿಡಾರಿಟಿ ಉಡುಪಿ: ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದು,ಹಾಡಹಗಲೇ ಈಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಪೊಲೀಸ್ ಇಲಾಖೆ ಈ ಕೃತ್ಯ ಎಸಗಿದ ದುಷ್ಕರ್ಮಿಯ ನ್ನು ಶೀಘ್ರ ಬಂಧಿಸಿ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡ ಬೇಕೆಂದು ಸಾಲಿಡಾರಿಟಿ ಯೂತ್’ ಮೂವ್ಮೆಂಟ್ ಉಡುಪಿ ಜಿಲ್ಲೆ ಆಗ್ರಹಿಸಿದೆ.
ಅದರೊಂದಿಗೆ ಉಡುಪಿ ಜಿಲ್ಲೆಯ ಜನತೆ ಯಾವುದೇ ವದಂತಿಗಳಿಗೆ ಕಿವಿ ಗೊಡದೆ ಆರೋಪಿಯ ಪತ್ತೆಗೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಇಂತಹ ಪ್ರಕರಣಗಳು ಜನರಲ್ಲಿ ಸಹಜವಾಗಿ ಆತಂಕ ಸೃಷ್ಟಿ ಮಾಡುತ್ತದೆ. ಆದ್ದರಿಂದ ಆದಷ್ಟು ಶೀಘ್ರ ಆರೋಪಿಗಳನ್ನು ಪೊಲೀಸ್ ಇಲಾಖೆ ಸೆರೆ ಹಿಡಿದು ಸೂಕ್ತ ಕಾನೂನು ಕ್ರಮಕೈಗೊಂಡು ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಸಾಲಿಡಾರಿಟಿ ಉಡುಪಿ ಜಿಲ್ಲಾಧ್ಯಕ್ಷ ನಬೀಲ್ ಗುಜ್ಜರ್ ಬೆಟ್ಟು ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ: ತಕ್ಷಣ ಹಂತಕನ ಬಂಧನವಾಗಲಿ– ಸರಕಾರದ ಬೇಜವಾಬ್ದಾರಿತನ ಖಂಡನೀಯ: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ
ಉಡುಪಿಯ ನೇಜಾರು ಕೆಮ್ಮಣ್ಣು ರಸ್ತೆಯ ತೃಪ್ತಿ ಲೇ ಔಟ್ ನಲ್ಲಿ ರವಿವಾರ ನಡೆದಿರುವ ತಾಯಿ ಮತ್ತು ಮೂವರ ಮಕ್ಕಳ ಭಯಾನಕ ಹತ್ಯೆ ಘಟನೆಯಿಂದ ಉಡುಪಿ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ. ಉಡುಪಿಯ ಇತಿಹಾಸದಲ್ಲೇ ಅತ್ಯಂತ ಭೀಕರ ಹತ್ಯಾಕಾಂಡವೊಂದು ಹಾಡಹಗಲೇ ಜಿಲ್ಲಾ ಕೇಂದ್ರಕ್ಕೆ ಸಮೀಪದಿಂದ ತೀರಾ ದೂರ ಇಲ್ಲದ ಊರೊಂದರಲ್ಲಿ ನಡೆದಿರುವುದು ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಇಂತಹದೊಂದು ಭೀಕರ ಅಪರಾಧ ನಮ್ಮ ಸುತ್ತಮುತ್ತಲಲ್ಲಿ ನಡೆದಿದೆ ಎಂಬುದನ್ನು ನಂಬಲೂ ಆಗದಂತಹ ಆಘಾತ ಉಡುಪಿ ಜಿಲ್ಲೆಯ ಜನರ ಪಾಲಿಗೆ ಬಂದೆರಗಿದೆ ಎಂದು ಸೋಮವಾರ ಸಂಜೆ ನಡೆದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಹೊಣೆಗಾರರ ತುರ್ತು ಸಭೆಯಲ್ಲಿ ಚರ್ಚಿಸಿದ ಬಳಿಕ ನೀಡಿರುವ ಪ್ರಕಟಣೆ ತಿಳಿಸಿದೆ.
ತಾಯಿ, ಆಕೆಯ ಇಬ್ಬರು ಹೆಣ್ಣು ಮಕ್ಕಳು ಹಾಗು ಒಬ್ಬ ಮಗನನ್ನು ಹಾಡಹಗಲಲ್ಲೇ ಅವರ ಮನೆಗೆ ನುಗ್ಗಿ ಕೇವಲ ಹತ್ತಿಪ್ಪತ್ತು ನಿಮಿಷಗಳಲ್ಲಿ ಕೊಂದು ಹಂತಕ ಆರಾಮವಾಗಿ ಪರಾರಿಯಾಗಿದ್ದಾನೆ. ಹತ್ಯಾಕಾಂಡ ನಡೆದು ಒಂದೂವರೆ ದಿನವಾಗಿದೆ. ಆದರೆ ಈವರೆಗೂ ಹಂತಕನ ಸುಳಿವು ಸಿಕ್ಕಿಲ್ಲ, ಬಂಧನ ಆಗಿಲ್ಲ. ಹಂತಕ ಕೊಲೆ ಮಡಿದ ಬಳಿಕ ಆತನನ್ನು ಕರೆದುಕೊಂಡು ಹೋಗಿದ್ದಾನೆ ಎನ್ನಲಾದ ಬೈಕ್ ಸವಾರನ ಬಗ್ಗೆಯೂ ಯಾವುದೇ ಸುಳಿವು ಈವರೆಗೆ ಸಿಕ್ಕಿರುವ ವರದಿಯಿಲ್ಲ. ಇದು ಜನರಲ್ಲಿ ಇನ್ನಷ್ಟು ಭೀತಿ ಸೃಷ್ಟಿಸಿದೆ. ಜೊತೆಗೆ ಜನರಲ್ಲಿ ನಾನಾ ಪ್ರಶ್ನೆಗಳನ್ನು ಸೃಷ್ಟಿಸಿದೆ. ಉಡುಪಿ ಪೊಲೀಸರು ಈ ದುರಂತದ ತನಿಖೆಯನ್ನು ಚುರುಕುಗೊಳಿಸಬೇಕು. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡು ನಿಷ್ಪಕ್ಷ ಹಾಗು ಕ್ಷಿಪ್ರ ತನಿಖೆ ನಡೆಸಿ ಹಂತಕ ಹಾಗು ಆತನ ಹಿಂದಿರುವ ಸೂತ್ರಧಾರಿ ಗಳನ್ನು ಆದಷ್ಟು ಶೀಘ್ರ ಬಂಧಿಸಿ ಕಾನೂನು ಪ್ರಕಾರ ಅತ್ಯಂತ ಗರಿಷ್ಟ ಶಿಕ್ಷೆ ಕೊಡಿಸಬೇಕು.
ಇನ್ನು ಇಷ್ಟು ದೊಡ್ಡ ಘಟನೆಯ ಬಗ್ಗೆ ರಾಜ್ಯ ಸರಕಾರ ಅತ್ಯಂತ ಸಂವೇದನಾರಹಿತವಾಗಿ ಹಾಗು ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಘಟನೆ ನಡೆದು ನಲ್ವತ್ತು ಘಂಟೆಗಳಾದರೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಕೊಟ್ಟಿಲ್ಲ ಕನಿಷ್ಠ ಒಂದು ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ. ಜನರಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿ, ಮಾಧ್ಯಮಗಳಲ್ಲಿ ಸುದ್ದಿಯಾದ ಮೇಲೆಯೇ ಉಸ್ತುವಾರಿ ಸಚಿವರು ಪೊಲೀಸರಿಗೆ ಮಾತನಾಡಿ ಸೂಚನೆ ನೀಡಿದ್ದಾರೆ ಎಂಬ ಹೇಳಿಕೆ ಬಂದಿದೆ. ಉಸ್ತುವಾರಿ ಸಚಿವರೂ ಓರ್ವ ಮಹಿಳೆ ಹಾಗು ತಾಯಿ. ಅವರಿಂದ ಉಡುಪಿಯ ಜನ ಇಂತಹ ಸಂವೇದನಾರಹಿತ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ. ಇದು ಜಿಲ್ಲೆಯ ಜನರಿಗೆ ತೀವ್ರ ನಿರಾಶೆ ತಂದಿದೆ.
ಹತ್ಯಾಕಾಂಡ ನಡೆದಿರುವ ನೇಜಾರು ಕೆಮ್ಮಣ್ಣು ಪ್ರದೇಶದಲ್ಲಿ ಹೆಚ್ಚಿನ ಪುರುಷರು ವಿದೇಶಗಳಲ್ಲಿ ಅಥವಾ ಪರಊರುಗಳಲ್ಲಿ ದುಡಿಯುವವರು. ಅಲ್ಲಿ ಹೆಚ್ಚಿನ ಮನೆಗಳಲ್ಲಿ ಮಹಿಳೆಯರು, ಮಕ್ಕಳೇ ಇರುತ್ತಾರೆ. ಹಾಗಾಗಿ ರವಿವಾರದ ಕಗ್ಗೊಲೆಗಳು ಈ ಪ್ರದೇಶದ ಜನರಲ್ಲಿ ಭಾರೀ ಭಯದ ವಾತಾವರಣ ಸೃಷ್ಟಿಸಿದೆ. ತಕ್ಷಣ ಹಂತಕನನ್ನು ಬಂಧಿಸುವುದು ಹಾಗು ಈ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮರಾ ಸಹಿತ ಇತರ ಕ್ರಮಗಳನ್ನು ತೆಗೆದುಕೊಂಡು ಜನರಲ್ಲಿ ಧೈರ್ಯ ತುಂಬುವ ಕೆಲಸವನ್ನು ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ತಡಮಾಡದೆ ಮಾಡಬೇಕಾಗಿದೆ. ಸರ್ಕಾರದ ಪ್ರತಿನಿಧಿಗಳು ಬಂದು ಸಂತ್ರಸ್ತ ಕುಟುಂಬದ ಸದಸ್ಯರನ್ನು ಹಾಗು ಪ್ರದೇಶದ ಜನರನ್ನು ಭೇಟಿಯಾಗಿ ಅವರಿಗೆ ಸ್ಥೈರ್ಯ ತುಂಬಬೇಕಾಗಿದೆ. ಇದು ಸರಕಾರದ ಆದ್ಯ ಕರ್ತವ್ಯ. ತಕ್ಷಣ ಈ ಕೆಲಸ ಆಗಬೇಕಾಗಿದೆ.