ಸಮುದ್ರದಲ್ಲಿ 43 ಗಂಟೆ ಈಜಾಡಿ ಪವಾಡ ಸದೃಶ್ಯವಾಗಿ ಪರಾಗಿ ಬಂದ ಮೀನುಗಾರ
ಕುಂದಾಪುರ: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಸಮುದ್ರದಲ್ಲಿ ಬಿದ್ದ ಮೀನುಗಾರ ಸತತ ಎರಡು ದಿನ ಸಮುದ್ರದ ನೀರಿನ ಮಧ್ಯದಲ್ಲಿ ಜೀವನ್ಮರಣದ ಹೋರಾಟ ನಡೆಸಿ ರಕ್ಷಣೆಗೊಳಗಾಗಿ ಬದುಕುಳಿದ ಘಟನೆ ಗಂಗೊಳ್ಳಿ ಸಮೀಪ ನಡೆದಿದೆ.
ಭಾನುವಾರ ಬೀಸಿದ ಗಾಳಿ ಮಳೆಯ ಅಬ್ಬರಕ್ಕೆ ಕೇರಳದ ಲಿಫ್ಟನ್ ಮೇರಿ ಎಂಬ ಬೋಟಿನಿಂದ ಸುಮಾರು 25 ವರ್ಷ ಪ್ರಾಯದ ತಮಿಳುನಾಡು ಮೂಲದ ವ್ಯಕ್ತಿಯೋರ್ವ ಆಯತಪ್ಪಿ ನೀರಿಗೆ ಬಿದ್ದಿದ್ದರು. ಸಮುದ್ರದ ನೀರಿಗೆ ಬಿದ್ದು ಯಾರು ತನ್ನ ರಕ್ಷಣೆಗೆ ಬಾರದಿದ್ದರೂ ಧೈರ್ಯ ಕಳೆದುಕೊಳ್ಳದ ಈತ ಸಮುದ್ರದಲ್ಲಿ ಈಜಾಡಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದನು. ಅದೆಷ್ಟೋ ಬೋಟುಗಳು ಈ ಭಾಗದಲ್ಲಿ ಮೀನುಗಾರಿಕೆ ನಡೆಸಿದ್ದರೂ ಯಾರ ಗಮನಕ್ಕೂ ಬಂದಿರಲಿಲ್ಲ. ಸತತ 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜಾಡಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಈತ ಕೊನೆಗೂ ಗಂಗೊಳ್ಳಿಯಿಂದ ಮಂಗಳವಾರ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ಸೀ ಸಾಗರ್ ಬೋಟಿನ ಮೀನುಗಾರರ ಕಣ್ಣಿಗೆ ಬಿದ್ದಿದ್ದ.
ಇನ್ನೇನು ಈಜಲು ಸಾಧ್ಯವಿಲ್ಲ ಎಂದು ತಿಳಿಯುತ್ತಾ ಸಮುದ್ರದಲ್ಲಿ ಕೊನೆಯ ಬಾರಿ ನೀರಿನ ಮೇಲೆದ್ದು, ಕೈ ಮೇಲೆ ಮಾಡಿದ ಸಂದರ್ಭ ಈತ ಸೀ ಸಾಗರ್ ಬೋಟಿನ ಶ್ರೀಧರ ಖಾರ್ವಿ ಉಪ್ಪುಂದ ಮತ್ತು ಸಂಜೀವ ಖಾರ್ವಿ ಮರವಂತೆ ಅವರ ಕಣ್ಣಿಗೆ ಬಿದ್ದಿದ್ದಾನೆ. ತಕ್ಷಣವೇ ಮೀನುಗಾರರು ಈತನ ಕೈಹಿಡಿದು ಸಮುದ್ರದ ನೀರಿನಿಂದ ಮೇಲಕ್ಕೆತ್ತಿ ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಗಂಗೊಳ್ಳಿಯಿಂದ ಸುಮಾರು 16 ನಾಟಿಕಲ್ ಮೈಲಿ ದೂರದಲ್ಲಿ ಸಮುದ್ರದ ಮಧ್ಯದಲ್ಲಿ ಜೀವದ ಹಂಗು ತೊರೆದು ರಕ್ಷಣೆಗಾಗಿ ಮೊರೆಯಿಟ್ಟ ಈ ವ್ಯಕ್ತಿ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ. 43ಗಂಟೆ ಸಮುದ್ರದಲ್ಲಿ ಈಜಿ ಸುಸ್ತಾಗಿದ್ದ ಈತನನ್ನು ಸೀ ಸಾಗರ್ ಬೋಟಿನ ಮೀನುಗಾರರು ಉಪಚರಿಸಿ ಸಂಬಂಧಪಟ್ಟ ಬೋಟ್ ಮಾಲೀಕರಿಗೆ ಈತನನ್ನು ಹಸ್ತಾಂತರಿಸಿದ್ದಾರೆ.
ಸಮುದ್ರದಲ್ಲಿ ಸುಮಾರು ದೂರದಲ್ಲಿ ಬಿದ್ದಿದ್ದ ಈತ ಈಜಾಡಿ ಗಂಗೊಳ್ಳಿ ಬಂದರಿನಿಂದ ಸುಮಾರು 16 ನಾಟಿಕಲ್ ಮೈಲು ದೂರಕ್ಕೆ ಬಂದಿದ್ದರು. ಸಮುದ್ರ ಮಧ್ಯದಲ್ಲಿ 24 ಗಂಟೆ ಈಜಾಡಿ ಬದುಕುವುದೇ ಕಷ್ಟ. ಆದರೆ ಸುಮಾರು 43 ಗಂಟೆಗಳ ಕಾಲ ಸತತವಾಗಿ ಈಜಾಡಿ ಜೀವನ್ಮರಣದ ಹೋರಾಟ ನಡೆಸಿ ಈತ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಅಚಾನಕ್ ನಮ್ಮ ಕಣ್ಣಿಗೆ ಬಿದ್ದಿದ್ದು ರಕ್ಷಿಸಿದ್ದೇವೆ ಎಂದು ಮೀನುಗಾರರಾದ ಶ್ರೀಧರ ಖಾರ್ವಿ ಉಪ್ಪುಂದ ಹೇಳಿದ್ದಾರೆ.