ಮಾಜಿ ರಾಜ್ಯಪಾಲ ಪಿ.ಬಿ.ಆಚಾರ್ಯ ನಿಧನ
ಉಡುಪಿ, ನ.10: ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ರಾಜ್ಯಪಾಲರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಉಡುಪಿ ಮೂಲದ ಪಿ.ಬಿ.ಆಚಾರ್ಯ (ಪದ್ಮನಾಭ ಬಾಲಕೃಷ್ಣ ಆಚಾರ್ಯ) ಅವರು ಇಂದು ಮುಂಬೈಯ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 92 ವರ್ಷ ಪ್ರಾಯವಾಗಿದ್ದು, ಪತ್ನಿ ಕವಿತಾ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಉಡುಪಿಯ ತೆಂಕಪೇಟೆಯಲ್ಲಿ ಬಾಲಕೃಷ್ಣ ಆಚಾರ್ಯ ಹಾಗೂ ರಾಧಾ ಆಚಾರ್ಯ ದಂಪತಿಗಳ ಪುತ್ರನಾಗಿ 1931 ಅ.8ರಂದು ಜನಿಸಿದ ಪಿ.ಬಿ.ಆಚಾರ್ಯ, ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ನಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಬಳಿಕ, ಎಂಜಿಎಂ ಕಾಲೇಜಿನ ಪ್ರಥಮ ಪದವಿ ಬ್ಯಾಚ್ನ ವಿದ್ಯಾರ್ಥಿಯಾಗಿ ಪದವಿ ಪಡೆದ ಬಳಿಕ ಮುಂಬೈಗೆ ತೆರಳಿದರು.
ಮುಂಬೈ ವಿವಿಯಿಂದ ಎಲ್ಎಲ್ಬಿ ಪದವಿ ಪಡೆದಿದ್ದ ಅವರು, ಮುಂಬೈ ವಿವಿಯ ಸೆನೆಟ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸಂಘ ಪರಿವಾರದ ಸಕ್ರಿಯ ಸದಸ್ಯರಾಗಿದ್ದ ಪಿ.ಬಿ.ಆಚಾರ್ಯ, ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
1980ರಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡ ಅವರು ಮೊದಲು ವಾಯುವ್ಯ ಮುಂಬೈ ಬಿಜೆಪಿ ಅಧ್ಯಕ್ಷರಾಗಿ 1991ರಲ್ಲಿ ಮುಂಬೈ ಬಿಜೆಪಿ ಸಮಿತಿ ಸದಸ್ಯರಾದರು. ಅನಂತರ ಈಶಾನ್ಯ ಭಾರತದ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವ ವಹಿಸಿ ಪಕ್ಷ ಕಟ್ಟುವಲ್ಲಿ ಶ್ರಮಿಸಿದ್ದರು.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ 2014ರ ಜುಲೈನಲ್ಲಿ ನಾಗಾಲ್ಯಾಂಡ್ ರಾಜ್ಯಪಾಲರಾಗಿ ನಿಯುಕ್ತಿಗೊಂಡರು. ಬಳಿಕ ಅಲ್ಲಿ ಅವರು ತ್ರಿಪುರ, ಅಸ್ಸಾಂ, ಅರುಣಾಚಲ ಪ್ರದೇಶ ಹಾಗೂ ಮಣಿಪುರಗಳ ಹಂಗಾಮಿ ರಾಜ್ಯಪಾಲರಾಗಿಯೂ ಅಧಿಕಾರ ಹೊಂದಿದ್ದು 2019ರವರೆಗೆ ಕಾರ್ಯನಿರ್ವಹಿಸಿದ್ದರು.
ರಾಜ್ಯಪಾಲರಾಗಿ ನಿಯುಕ್ತಿಗೊಂಡ ಬಳಿಕ ಹಲವು ಬಾರಿ ಹುಟ್ಟೂರು ಉಡುಪಿಗೆ ಭೇಟಿ ನೀಡಿದ ಅವರನ್ನು ಅದಮಾರು ಶ್ರೀಗಳ ಪರ್ಯಾಯ ದರ್ಬಾರಿನಲ್ಲಿ ಸನ್ಮಾನಿಸಲಾಗಿತ್ತು. ಈಶಾನ್ಯ ರಾಜ್ಯಗಳ ಬುಡಕಟ್ಟು, ಗುಡ್ಡಗಾಡು ಜನಾಂಗದ ಅಭಿವೃದ್ಧಿ ಕುರಿತಂತೆ ಹಲವು ಯೋಜನೆಗಳನ್ನು ಹೊಂದಿದ್ದ ಅವರು ಆ ಪ್ರದೇಶಗಳ ಶೈಕ್ಷಣಿಕ ಪ್ರಗತಿಯ ಕುರಿತಂತೆಯೂ ಕಾಳಜಿಯನ್ನು ಹೊಂದಿದ್ದರು.