ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ ಹೃದಯಾಘಾತದಿಂದ ನಿಧನ
ಉಡುಪಿ: ಹಿರಿಯ ಪತ್ರಕರ್ತ ಶಶಿಧರ್ ಹೆಮ್ಮಣ್ಣ (57) ಹೃದಾಯಘಾತದಿಂದ ನಿಧನ ಹೊಂದಿದ್ದಾರೆ.
ಗುರವಾರ ಬೆಳಿಗ್ಗೆ ಉಡುಪಿಯ ಮನೆಯಲ್ಲಿದ್ದಾಗ ಧಿಢೀರಾಗಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಮನೆಯವರು ನಗರದ ಆಸ್ಪತ್ರೆಗೆ ತೋರಿಸಿದಾಗ ಹೃದಯಾಘಾತ ಅಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಮ್ಮಣ್ಣರವರು ರಾತ್ರಿ ಹೊತ್ತಿಗೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದರು.
1991 ರಲ್ಲಿ ಕುಂದಪ್ರಭ ಪತ್ರಿಕೆಯ ಮೂಲಕ ವೃತ್ತಿ ಜೀವನ ಅರಂಭಿಸಿದ ಶಶಿಧರ್ – “ಕ್ಷಿತಿಜ” ಎನ್ನುವ ಸ್ವಂತ ವಾರ ಪತ್ರಿಕೆ ಆರಂಭಿಸಿ, ಮುಖ್ಯ ಸಂಪಾದಕರಾಗಿದ್ದರು.ಬಳಿಕ ಸ್ಪಂದನ ವಾಹಿನಿ, ಈ ಟಿವಿ ಕನ್ನಡದ ಅನ್ನದಾತ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕೃಷಿ ಮಾಹಿತಿಗಳನ್ನು ರಾಜ್ಯಾದ್ಯಂತ ಪಸರಿಸಿದ್ದರು. ಡಿಡಿ ನ್ಯೂಸ್ ನಲ್ಲಿ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಹಲವು ಉದಯೋನ್ಮುಕ ಪತ್ರಕರ್ತರಿಗೆ ಪ್ರೇರಕರಾಗಿದ್ದ ಹೆಮಣ್ಣ ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೃಷಿ ಸಂಬಂಧಿತ ಲೇಖನಗಳನ್ನು ಬರೆದು ,ಸರಕಾರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇತ್ತೀಚೆಗಷ್ಟೇ ಕನೆಕ್ಟ್ ಮಿಡಿಯಾ ಸಂಸ್ಥೆಯನ್ನು ಹುಟ್ಟುಹಾಕಿ, ಹಲವು ಯೋಜನೆಗಳನ್ನು ರಾಜ್ಯದಾದ್ಯಂತ ಅರಂಭಿಸುವ ಕಾರ್ಯ ದಲ್ಲಿ ತೊಡಗಿಸಿಕೊಂಡಿದ್ದರು.ರಾಜಕೀಯ ಸಮೀಕ್ಷೆಗಳಲ್ಲಿ ಎತ್ತಿದ ಕೈಯಾಗಿದ್ದ ಇವರಿಗೆ ಹಲವಾರು ರಾಜಕೀಯ ನಾಯಕರನ್ನು ಬೆಳೆಸಿದ ಕೀರ್ತಿ ಸಲ್ಲುತ್ತದೆ.
ಪರಿಸರ ಪ್ರೇಮಿಯೂ,ಕೃಷಿ ಪ್ರೇಮಿಯೂ ಅಗಿದ್ದ ಇವರು,ಕರಾವಳಿಯಲ್ಲಿ ಕಾಂಡ್ಲವನ ಯೋಜನೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕರಾವಳಿಯಲ್ಲಿ ಪ್ರಾಕೃತಿಕ ವಿಕೋಪಗಳ ಬಗ್ಗೆ ಅಪಾರ ಕಾಳಜಿ ವಹಿಸಿದ್ದರು. ನೆಲ ಜಲ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನೀರು ಅರುವ ಮುನ್ನ ಕಾರ್ಯಕ್ರಮದ ಮೂಂಚಣಿಯಲ್ಲಿದ್ದವರು.
ಮೃತರು ತಂದೆ ತಾಯಿ, ಪತ್ನಿ , ಪುತ್ರ, ನಾಲ್ಕು ಜನ ಸಹೋದರು ಹಾಗೂ ಸಹೋದರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಹಿರಿಯ ಪತ್ರಕರ್ತರ ನಿಧನಕ್ಕೆ ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ.
ಮೃತರ ಅಂತ್ಯಕ್ರಿಯು ಕುಂದಾಪುರ ತಾಲೂಕಿನ ಕಮಲ ಶಿಲೆ ಸಮೀಪದ ಎಡಮೊಗೆಯಲ್ಲಿರುವ ಕುಟುಂಬದ ಸ್ವಗೃಹದಲ್ಲಿ ಶುಕ್ರವಾರ ಬೆಳಿಗ್ಗೆ ಸುಮಾರು 9.30 ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.