ಮಹಿಳೆಯರು ನೀರು ಬಳಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ- ನಳಿನ್ ಕುಮಾರ್ ಕಟೀಲ್

ಮಂಗಳೂರು, ನ.09: ನೀರು ನಿಸರ್ಗದ ಅಮೂಲ್ಯವಾದ ಕೊಡುಗೆ, ಮನುಷ್ಯ ಜೀವಿಸಲು ಆಹಾರಕ್ಕಿಂತ ನೀರು ಮಹತ್ವವಾದದ್ದು. ನೀರು ಇಲ್ಲದೆ ಯಾವುದೇ ಜೀವ ಬದುಕಲು ಅಸಾಧ್ಯ ಎಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಗುರುವಾರ ತುಂಬೆಯಲ್ಲಿ ಮಹಾನಗರ ಪಾಲಿಕೆ ನೀರು ಸಂಸ್ಕರಣ ಘಟಕದಲ್ಲಿ ನಡೆದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಿರ್ದೇಶನ, ಅಮೃತ 2.0 ಯೋಜನೆಯಡಿ ನಡೆದ ಜಲ ದೀಪಾವಳಿ “ಮಹಿಳೆಯರಿಗಾಗಿ ನೀರು ನೀರಿಗಾಗಿ ಮಹಿಳೆಯರು” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿವಿದೆಡೆ ಮಳೆ ಇಲ್ಲದೆ ನೀರಿನ ಕೊರತೆ ಉಂಟಾಗಿ ಬರಗಾಲ ಬಂದಿದೆ. ಜಿಲ್ಲೆಯಲ್ಲಿ ನೇತ್ರಾವತಿ ನದಿ ಹರಿಯುವುದರಿಂದ ನೀರಿನ ಹಾಹಾಕಾರ ಇಲ್ಲದಿರುವುದು ನಮ್ಮ ಸೌಭಾಗ್ಯ ಎಂದು ಅವರು ಹೇಳಿದರು.
 ನೀರಿನ ಮಹತ್ವದ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ಅರಿವು ಇರುತ್ತದೆ. ನೀರಿನ ಉತ್ತಮ ನಿರ್ವಹಣೆಯಲ್ಲಿ ಮುಂದಾಳತ್ವ ವಹಿಸಬಹುದು.

ಈ ಜಲ ದೀಪಾವಳಿ ಕಾರ್ಯಕ್ರಮದ ಮೂಲ ಉದ್ದೇಶ ನದಿಯಿಂದ ಬಂದ ನೀರು ಶುದ್ಧೀಕರಿಸಿ ಮನೆಗೆ ಬರುವ ಪ್ರಕ್ರಿಯೆ ಮಹಿಳೆಯರಿಗೆ ಅರ್ಥವಾದರೆ ನೀರು ಇನ್ನು ಹೆಚ್ಚು ಉಳಿಸಬಹುದು ಮನೆಯ ಸದ್ಯಸರಿಗೆ ನೀರಿನ ಮಹತ್ವ ತಿಳಿಸಬಹುದು. ನೀರನ್ನು ಶುದ್ಧೀಕರಣ ಮಾಡಿ ಜನರಿಗೆ ಪೂರೈಸುವ ಕಾರ್ಯ ಸರ್ಕಾರದಾಗಿದೆ. ಆದರೆ ನೀರನ್ನು ಮಿತವಾಗಿ ಹಿತವಾಗಿ ಬಳಸುವ ಜವಾಬ್ದಾರಿ ನಮ್ಮದ್ದಾಗಿದೆ ಎಂದು ಶುಭ ಹಾರೈಸಿದರು. ಮಂಗಳೂರು ಮಹಾನಗರಪಾಲಿಕೆ ಮಹಾಪೌರರಾದ ಸುಧೀರ್ ಶೆಟ್ಟಿ ಕಣ್ಣೂರು, ಸರಕಾರದ ಲೆಕ್ಕಾಚಾರದ ಪ್ರಕಾರ ವ್ಯಕ್ತಿಯೊಬ್ಬರಿಗೆ ದಿನಕ್ಕೆ 135 ಲೀಟರ್ ನೀರಿನ ಅಗತ್ಯವಿರುತ್ತದೆ. ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು, ಬಳಸುತ್ತಿರುವ ಶುದ್ಧ ನೀರಿನ ಹಿನ್ನಲೆ ತಿಳಿಯಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಿಂದ ನೀರಿನ ಉಪಯೋಗ ಮತ್ತು ಸದ್ಬಳಕೆಯಾಗಲಿದೆ. ಹಂತ ಹಂತವಾಗಿ ನಗರ ಅಭಿವೃದ್ಧಿಯ ಕಡೆಗೆ ಸಾಗುತ್ತಿದೆ ಎಂದರು.

ನೇತ್ರಾವತಿ ನದಿಯಿಂದ ತುಂಬೆ ಅಣೆಕಟ್ಟಿನಲ್ಲಿ ನೀರನ್ನು ಯಾವ ರೀತಿಯಲ್ಲಿ ಸಂಸ್ಕರಣೆಗೊಳಿಸಿ ನಗರದವರಿಗೆ ಪೂರೈಕೆ ಮಾಡಲಾಗುತ್ತದೆ ಎಂಬುದನ್ನು ಮಹಿಳೆಯರು ಅರ್ಥಮಾಡಿಕೊಂಡು ನೀರಿನ ಬಳಕೆಯ ಜಾಗೃತಿ ಮೂಡಿಸಬೇಕು ಎಂದು ಅವರು ಸೂಚಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಾದ ಆನಂದ್ ಸಿ.ಎಲ್, ಉಪ ಮೇಯರ್ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ್ ಶೆಟ್ಟಿ ವಿಪಕ್ಷ ನಾಯಕ ಪ್ರವೀಣ್‍ಚಂದ್ರ ಆಳ್ವ ಮತ್ತು ಸ್ವಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!