ಲೋಕಸಭೆಗೆ ಸ್ಪರ್ಧಿಸದಂತೆ ಹೈಕಮಾಂಡ್ ಸೂಚನೆ ಮೇರೆಗೆ ಸದಾನಂದ ಗೌಡ ನಿವೃತ್ತಿ ಘೋಷಣೆ: ಬಿಎಸ್ ಯಡಿಯೂರಪ್ಪ
ಬೆಂಗಳೂರು: ಹೈಕಮಾಂಡ್ ಸೂಚನೆ ಮೇರೆಗೆ ಸದಾನಂದ ಗೌಡರು ತಮ್ಮ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸಿದ್ದಾರೆ, ಚುನಾವಣಾ ರಾಜಕೀಯ ತೊರೆದು ಪಕ್ಷದ ಚಟುವಟಿಕೆಗಳಲ್ಲಿ ಅವರು ಇನ್ನು ಮುಂದೆ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ ಸಿಗಲಾರದೆನ್ನುವ ಕಾರಣಕ್ಕೆ ಅವರು ಚುನಾವಣಾ ರಾಜಕೀಯದಿಂದ ದೂರ ಸರಿಯವ ನಿರ್ಧಾರ ಮಾಡಿದರೇ ಎಂದು ಇಂದು ಬೆಂಗಳೂರು ಸಿಟಿ ರೌಂಡ್ಸ್ ವೇಳೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಯಡಿಯೂರಪ್ಪ, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಅಂತ ನೇರವಾಗಿ ವರಿಷ್ಠರು ಅವರಿಗೆ ಹೇಳಿದ್ದಾರೆ, ಆದರೆ ಪಕ್ಷದ ಬೇರೆಲ್ಲ ಚಟುವಟಿಕೆಗಳಲ್ಲಿ ಅವರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
ಬಿಜೆಪಿ ನಾಯಕ ಸದಾನಂದ ಗೌಡರು ಪ್ರಸ್ತುತ ಲೋಕಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2024ರ ಚುನಾವಣೆಯಲ್ಲಿ ಪಕ್ಷವು ಅವರನ್ನು ಕಣಕ್ಕಿಳಿಸುವುದಿಲ್ಲ, ಅವರಿಗೆ ಟಿಕೆಟ್ ನೀಡುವುದಿಲ್ಲ ಎಂಬ ವದಂತಿಗಳ ನಡುವೆಯೇ ಈ ಘೋಷಣೆ ಹೊರಬಿದ್ದಿದೆ. 2021 ರಲ್ಲಿ, ಸಂಪುಟ ಪುನರ್ರಚನೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಸದಾನಂದ ಗೌಡರು ತಮ್ಮ ಕೇಂದ್ರ ಸಚಿವ ಸ್ಥಾನದಿಂದ ಕೆಳಗಿಳಿದಿದ್ದರು.
ನಿನ್ನೆ ಹಾಸನದಲ್ಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದ ಸದಾನಂದ ಗೌಡರು ಇಂದು ಮಂಡ್ಯದಲ್ಲಿ ಮತ್ತೊಮ್ಮೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕೀಯ ನಿವೃತ್ತಿ ಹಿಂದೆ ಯಾರ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.
ಯುವಕರಿಗೆ ಆದ್ಯತೆ ನೀಡುವ ಸಮಯವಿದು: ಮನುಷ್ಯನಿಗೆ ಕೆಲವು ಇತಿಮಿತಿ ಇರಬೇಕು. ಮೂವತ್ತು ವರ್ಷದಿಂದ ಎಲ್ಲ ಸ್ಥಾನಮಾನ ನೋಡಿದ್ದೇನೆ. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಕೂಡ ಅಗಿದ್ದೆ. ಕೇಂದ್ರದಲ್ಲಿ ಏಳು ವರ್ಷ ಮೋದಿ ಜೊತೆ ಇದ್ದೆ. ಸಿಎಂ ಆಗಿದ್ದೆ, ರಾಜ್ಯಾಧ್ಯಕ್ಷ ಕೂಡ ಆಗಿದ್ದೆ. ಬಿಜೆಪಿ ದೊಡ್ಡ ಮಟ್ಟದ ಸಂಘಟನೆ ಆಗುತ್ತಿದೆ. 40 ವರ್ಷಕ್ಕಿಂತ ಕೆಳಗಿನವರು ದೇಶದಲ್ಲಿ 60 ಪರ್ಸೆಂಟ್ ಇದ್ದಾರೆ. ನಾನು ಸಾಯುವಾಗ ನನ್ನ ಶವಕ್ಕೆ ಬಿಜೆಪಿ ಬಟ್ಟೆ ಹಾಕಬೇಕು ಎನ್ನುವ ರಾಜನೀತಿ ಒಪ್ಪಲ್ಲ ಎಂದರು.
ಪಕ್ಷ ಎಲ್ಲವೂ ಕೊಟ್ಟಿದೆ. 25 ವರ್ಷದ ನಂತರ ಚುನಾವಣಾ ರಾಜಕೀಯ ದೂರ ಆಗಬೇಕು ಎಂದುಕೊಂಡಿದ್ದೇ. ಆದರೆ ಪಕ್ಷದ ಒತ್ತಡದ ಹಿನ್ನೆಲೆಯಲ್ಲಿ ನಾನು ಕಳೆದ ಬಾರಿ ಸ್ವರ್ಧೆ ಮಾಡಿದ್ದೆ. ಈ ಬಾರಿ ಆರು ತಿಂಗಳ ಮುಂಚೆ ಹೇಳಿದರೆ ಹೊಸಬರನ್ನು ಹುಡುಕಲು ಅನುಕೂಲ ಆಗುತ್ತದೆ. ಪಾರ್ಟಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ಪಕ್ಷ ಏನಾದರೂ ಚಿರತೆ ಹೊಡಿಸುವಂತೆ ಹೇಳಿದರೂ ಸಹ ನಾನು ಅದನ್ನು ಮಾಡುತ್ತೇನೆ. ನಾನು ಯಾರ ಹಿಂದೆ ಚೀಲ ಹಿಡಿದು ಕೊಂಡು ಹೋಗಿಲ್ಲ. ಯಾರಿಗೂ ಬೆಣ್ಣೆ ಹಾಕಿಕೊಂಡು ಹೋಗಿಲ್ಲ. ಗುಂಪುಗಾರಿಕೆ ಮಾಡಿಲ್ಲ. ಬಿಜೆಪಿ ಗುಂಪು ಮಾತ್ರ. ರಾಜಕೀಯ ನಿವೃತ್ತಿ ಹಿಂದೆ ಯಾರ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.