ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆ ದೇಶಕ್ಕೆ ಮಾದರಿ- ಶಾಸಕ ಯಶ್‌ಪಾಲ್ ಸುವರ್ಣ

ಉಡುಪಿ, ನ.08: ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆಯರು ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಉಡುಪಿ ಜಿಲ್ಲೆಯು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.

ಅವರು ಇಂದು ಉಡುಪಿ ತಾಲೂಕು ಪಂಚಾಯತ್ ಆವರಣದಲ್ಲಿರುವ ಸಂಜೀವಿನಿ ಮಾರಾಟ ಮಳಿಗೆಯಲ್ಲಿ, ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ವಿವಿಧ ವಿನ್ಯಾಸದ ಮಣ್ಣಿನ ಹಣತೆ, ದೀಪಾವಳಿ ಗಿಫ್ಟ್ ಪ್ಯಾಕ್ ಹಾಗೂ ಉಡುಪಿ ಸಂಜೀವಿನಿ ಕಜೆ ಅಕ್ಕಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸಂಜೀವಿನಿ ಸಂಘದ ಸದಸ್ಯರ ಹಡಿಲು ಗದ್ದೆ ಕೃಷಿಯು ಜನರಲ್ಲಿ ಕೃಷಿಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಭತ್ತದ ಬೆಳೆಯ ಜೊತೆಗೆ ತರಕಾರಿ ಬೆಳೆಯುವುದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳುವುದರೊಂದಿಗೆ ವರ್ಷದ 12 ತಿಂಗಳೂ ಗದ್ದೆಗಳಲ್ಲಿ ಕೆಲಸ ಮಾಡುವಂತಾಗಬೇಕು. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳ ಮಾರ್ಗದರ್ಶನ ಅತೀ ಅಗತ್ಯ ಎಂದರು.

ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಸಂಜೀವಿನಿ ಸ್ವ-ಸಹಾಯ ಸಂಘದ ತಯಾರಿಸಿದ ದೀಪಾವಳಿ ಗಿಫ್ಟ್ ಪ್ಯಾಕ್‌ಗಳನ್ನು ಗ್ರಾಹಕರು ಖರೀದಿಸುವಂತೆ ತಿಳಿಸಿದ ಅವರು, ಹಡಿಲು ಗದ್ದೆಯಲ್ಲಿ ಬೆಳೆದಿರುವ ಕಜೆ ಅಕ್ಕಿಯು ಸಾವಯವ ವಿಧಾನದಲ್ಲಿ ಬೆಳೆಯುವುದರಿಂದ ಆರೋಗ್ಯಕ್ಕೆ ಉತ್ತಮವಾಗಿದ್ದು, ಇದನ್ನು ಸಾರ್ವಜನಿಕರು ಬಳಸುವುದರೊಂದಿಗೆ ಅವರುಗಳಿಗೆ ನೆರವಾಗಿರಬೇಕು. ಸಂಜೀವಿನಿ ಸಂಘದ ಸದಸ್ಯರು ಸ್ವ-ಸಾಮಥ್ಯದ ಮೂಲಕ ರಾಜ್ಯದ ಇತರೆ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ ಎಂದರು.

ಜಿಲ್ಲಾ ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ, ಗ್ರಾಮೀಣ ಮಹಿಳೆಯರು ತಯಾರಿಸುವ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಿಸುವ ಸಲುವಾಗಿ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ.

ದೀಪಾವಳಿ ಹಬ್ಬಕ್ಕೆ ಮಣ್ಣಿನ ಹಣತೆಯ ಬೇಡಿಕೆ ಇರುವುದರಿಂದ ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆಯರು ವಿವಿಧ ವಿನ್ಯಾಸದ ಮಣ್ಣಿನ ಹಣತೆಗಳನ್ನು ತಯಾರಿಸಿದ್ದು, ಅವುಗಳನ್ನು ಹೆಚ್ಚಾಗಿ ಖರೀದಿಸುವ ಮೂಲಕ ಅವರುಗಳಿಗೆ ಪ್ರೋತ್ಸಾಹ ನೀಡಬೇಕು. ಇದರಲ್ಲಿ ಮಧ್ಯವರ್ತಿಗಳ ಹಾವಳಿಯಿಲ್ಲದಿರುವುದ ರಿಂದ ಇದರ ಲಾಭವನ್ನು ನೇರವಾಗಿ ಸಂಜೀವಿನಿ ಸದಸ್ಯರು ಪಡೆಯಲಿದ್ದಾರೆ ಎಂದರು.

ಜಿ.ಪಂ. ಮುಖ್ಯ ಯೋಜನಾಕಾರಿ ಶ್ರೀನಿವಾಸ ರಾವ್, ಜಿ.ಪಂ. ಯೋಜನಾ ನಿರ್ದೇಶಕ ಪ್ರಶಾಂತ್ ರಾವ್, ಕೃಷಿ ಇಲಾಖೆಯ ಚಂದ್ರಶೇಖರ್, ಉಡುಪಿ ತಾ.ಪಂ. ಕಾರ್ಯನಿರ್ವಹಣಾಕಾರಿ ವಿಜಯಾ, ಸಂಜೀವಿನಿ ಒಕ್ಕೂಟದ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!