ವಿದ್ಯುತ್ ಖಾಸಗೀಕರಣ – ರಾಜ್ಯದ ಗೃಹ ಜ್ಯೋತಿ ಯೋಜನೆಗೆ ಕೇಂದ್ರ ಅಡ್ಡಗಾಲು: ಬಾಲಕೃಷ್ಣ ಶೆಟ್ಟಿ
ಉಡುಪಿ, ನ.8: ಕೇಂದ್ರ ಸರಕಾರ ರೈಲು ಮತ್ತು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿದೆ. ಜನತೆ ಸರಕಾರದ ಈ ಆರ್ಥಿಕ ಹಾಗೂ ಜನ ವಿರೋಧಿ ನೀತಿ ವಿರುದ್ಧ ಹೋರಾಟ ಮಾಡದಂತೆ ಕ್ಷುಲ್ಲಕ ಕಾರಣಕ್ಕೆ ಧರ್ಮ ಧರ್ಮ ಗಳ ಮಧ್ಯೆ ಗಲಭೆ ಸೃಷ್ಠಿ ವಿಭಜಿಸುವ ಹುನ್ನಾರ ಮಾಡುತ್ತಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.
ವಿದ್ಯುತ್ ಮತ್ತು ರೈಲ್ವೆ ಖಾಸಗೀಕರಣ ವಿರೋಧಿಸಿ ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ನೇತೃತ್ವದಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಮಂಗಳವಾರ ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
‘ವಿದ್ಯುತ್ ಖಾಸಗೀಕರಣದಿಂದ ರಾಜ್ಯ ಸರಕಾರದ ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆಗೂ ಕೇಂದ್ರ ಸರಕಾರ ಅಡ್ಡಗಾಲು ಹಾಕುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ರಾಜ್ಯಕ್ಕೆ ನೀಡುವ ಸಬ್ಸಿಡಿ ಯನ್ನು ಕಡಿತ ಮಾಡುವ ಎಲ್ಲ ಅವಕಾಶವನ್ನು ತನ್ನ ಹೊಸ ನೀತಿಯಲ್ಲಿ ಇಟ್ಟು ಕೊಂಡಿದೆ’
ಇಂದು ಭಾರತದಲ್ಲಿ ರೈಲು ಆಗಾಧ ಪ್ರಮಾಣಧಲ್ಲಿ ಬೆಳೆದು ನಿಂತಿದೆ. 75 ವರ್ಷಗಳಿಂದ ಸರಕಾರದ ಕೈಯಲ್ಲಿದ್ದ ಸಂಸ್ಥೆ ಯನ್ನು ಮೋದಿ ಒಂದೊಂದಾಗಿ ಮಾರಾಟ ಮಾಡುತ್ತಿದ್ದಾರೆ. ದೇಶದ 400 ರೈಲ್ವೆ ನಿಲ್ದಾಣವನ್ನು ಖಾಸಗಿಕರಣ ಮಾಡಲು ಹಸಿರು ನಿಶಾನೆ ಕೊಡಲಾಗಿದೆ. ಸರಕಾರಿ ಹಳಿಯಲ್ಲಿ ಓಡಾಟ ನಡೆಸುವ ಖಾಸಗಿ ರೈಲುಗಳಿಗೆ ಬೇಕಾಬಿಟ್ಟಿ ಲೂಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ದೂರಿದರು.
ಈಗಾಗಲೇ ವಿದ್ಯುತ್ ಉತ್ಪಾದನೆಯನ್ನು ಖಾಸಗಿಯವರಿಗೆ ವಹಿಸಿಕೊಡಲಾಗಿದೆ. ಇನ್ನು ಮುಂದೆ ವಿದ್ಯುತ್ ಪ್ರಸರಣ ಮತ್ತು ಮನೆಮನೆ ವಿತರಣೆಯನ್ನು ಕೂಡ ಖಾಸಗಿಯವರಿಗೆ ಕೊಡುವ ಉದ್ದೇಶ ಸರಕಾರದ ಮುಂದೆ ಇದೆ. ಸ್ಮಾರ್ಟ್ ಮೀಟರ್ ಮೂಲಕ ಮುಂದೆ ಪ್ರೀಪೈಡ್ ವ್ಯವಸ್ಥೆ ಜಾರಿಗೆ ತರುವ ಹುನ್ನಾರವನ್ನು ಸರಕಾರ ಮಾಡುತ್ತಿದೆಂದು ಅವರು ತಿಳಿಸಿದರು.
ಮೀಟರ್ ಅಳವಡಿಕೆ ಕಾರ್ಯವನ್ನು 2025ರ ಮಾರ್ಚ್ ಒಳಗೆ ಪೂರ್ಣ ಗೊಳಿಸುವಂತೆ ಕೇಂದ್ರ ಸರಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಇದರಿಂದ ಮುಂದೆ ಎಲ್ಲರಿಗೂ ಗಂಡಾಂತರ ಕಾದಿದೆ. ಆದುದರಿಂದ ಮುಂದಿನ ಚುನಾವಣೆ ಯಲ್ಲಿ ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯುವ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.
ಸಿಐಟಿಯು ಜಿಲ್ಲಾ ಖಜಾಂಚಿ ಶಶಿಧರ್ ಗೊಲ್ಲ ಮಾತನಾಡಿದರು. ಧರಣಿ ಯಲ್ಲಿ ಸಿಐಟಿಯು ಮುಖಂಡರಾದ ಮೋಹನ್, ರಾಮ ಸಾಲಿಯಾನ್, ಸುಭಾಷ್‌ಚಂದ್ರ ನಾಯ್ಕ್, ರಾಮ ಕರ್ಕಡ, ನಳಿನಿ, ದಯಾನಂದ ಕೋಟ್ಯಾನ್, ರಮೇಶ್, ಪ್ರತಿಮಾ, ಸದಾಶಿವ ಪೂಜಾರಿ, ದಯಾನಂದ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯುತ್- ರೈಲ್ವೆ ಖಾಸಗೀಕರಣ ವಿರೋಧಿಸಿ ಕುಂದಾಪುರದಲ್ಲಿ ಧರಣಿ
ಕುಂದಾಪುರ : ವಿದ್ಯುತ್ ಮತ್ತು ರೈಲ್ವೆ ಖಾಸಗೀಕರಣ ವಿರೋಧಿಸಿ ರೈತ ಕಾರ್ಮಿಕ ಕೂಲಿಕಾರರ ಮಹಾಧರಣಿಯ ಪ್ರಚಾರೋಂದಲನ ಕುಂದಾಪುರ ಶಾಸ್ತ್ರಿ ಸರ್ಕಲ್ ಸಮೀಪ ಮಂಗಳವಾರ ಸಂಜೆ ನಡೆಯಿತು.
ಸಿಪಿಎಂ ವಲಯ ಕಾರ್ಯದರ್ಶಿ ಎಚ್.ನರಸಿಂಹ ಮಾತನಾಡಿ, ಕೇಂದ್ರ ಸರಕಾರ ಕಾರ್ಪೊರೇಟ್ ಬಂಡವಾಳಪರ ನವ ಉದಾರವಾದ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿಗೆ ತರುತ್ತಿರುವುದರಿಂದ ದೇಶದ ದುಡಿಯುವ ಜನತೆ ಸಂಕಷ್ಟಕ್ಕೆ ಒಳಗಾಗುತ್ತಿದೆ. ಸರಕಾರದ ತಪ್ಪುನೀತಿಗಳಿಂದ ರೈತರು ಸಾಲಬಾಧೆಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದು ಹಾಗೂ ಬೆಳೆದ ಬೆಳೆಗಳಿಗೆ ಸೂಕ್ತ ವೈಜ್ಞಾನಿಕ ಬೆಲೆ ಸಿಗದೆ ಕೃಷಿ ತೊರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ದೂರಿದರು.