ಪ್ರಧಾನಿ ಮೋದಿ ಸರ್ವಾಧಿಕಾರಿಯೇ? ಅವರನ್ನು ಪ್ರಶ್ನಿಸುವುದರಲ್ಲಿ ತಪ್ಪೇನಿದೆ- ಬಿಎಸ್’ವೈಗೆ ಸಿದ್ದರಾಮಯ್ಯ
ಹಾಸನ: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ವಾಧಿಕಾರಿಯೇ? ಅವರನ್ನು ಪ್ರಶ್ನಿಸುವುದರಲ್ಲಿ ತಪ್ಪೇನಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಪ್ರಶ್ನಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ವಿರುದ್ಧ ದುರಹಂಕಾರದಿಂದ ಮಾತನಾಡುತ್ತಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು. ಪ್ರಧಾನಿ ಮೋದಿ ಸರ್ವಾಧಿಕಾರಿಯೇ? ಮೋದಿಯವರು ನನ್ನ ಬಗ್ಗೆ ಮಾತನಾಡಬಹುದಾ? ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ವಿಚಾರ ಮಾತಾಡೋದು ಏನಿರುತ್ತೆ?. ಚುನಾವಣಾ ಪ್ರಚಾರ ಮಾಡಬೇಕು ಅಷ್ಟೇ, ಮೋದಿಯವರಿಗೆ ನಮ್ಮ ಬಗ್ಗೆ ಭಯ ಇರಬೋದೇನೋ ಎಂದು ಹೇಳಿದರು.
ಇದೇ ವೇಳೆ ‘ಕೇವಲ ಶಾಸಕರನ್ನು ಸೆಳೆಯೋ ಕೆಲಸ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಯಾವತ್ತು ಸತ್ಯ ಹೇಳಿದ್ದಾರೆ? ಎಲ್ಲಾ ಬರೀ ಸುಳ್ಳೇ ಹೇಳುವುದು. ಅದು ಬಿಟ್ಟರೆ ಅವರಿಗೆ ಬೇರೆ ಕೆಲಸ ಇಲ್ಲ ಎಂದರು. ಕಿಯೋನಿಕ್ಸ್ ಅಧಿಕಾರಿ ಸಂಗಪ್ಪ ಲಂಚ ಕೇಳಿದ ಆರೋಪ ವಿಚಾರದ ಬಗ್ಗೆ ಮಾತನಾಡಿ, ನಾನು ಈ ಬಗ್ಗೆ ವಿಚಾರಣೆ ಮಾಡುತ್ತೇನೆ. ಅದು ಸತ್ಯವಾಗಿದ್ದರೆ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಬಳಿಕ ಕಾಂಗ್ರೆಸ್ ಶೇಮ್ ಲೆಸ್ ಪಾರ್ಟಿ ಎಂಬ ಯತ್ನಾಳ್ ಅವರ ಹೇಳಿಕೆ ಕುರಿತು ಮಾತನಾಡಿ, ಯತ್ನಾಳ್ ಏನು ಬಹಳ ಸದ್ಗುಣ ಇರೋ ವ್ಯಕ್ತಿನಾ? ಬಿಜೆಪಿಯವರೇ ನಡವಳಿಕೆ ಸರಿ ಇಲ್ಲ ಎಂದು ನೋಟಿಸ್ ಕೊಟ್ಟಿಲ್ವಾ? ಇನ್ನು ಅವರಿಗೆ ನೋಟಿಸ್ ಕೊಟ್ಟವರ್ಯಾರು? ‘ಯತ್ನಾಳ್ ಹಿಮ್ಸೆಲ್ಫ್ ಈಸ್ ಎ ಶೇಮ್ ಲೆಸ್’ ಎಂದು ಲೇವಡಿ ಮಾಡಿದರು.