ಹಿರಿಯ ರಾಜಕೀಯ ನಾಯಕ, ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ಇನ್ನಿಲ್ಲ
ಚಿಕ್ಕಮಗಳೂರು: ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವ ಡಿ.ಬಿ ಚಂದ್ರೇಗೌಡ(87) ಸೋಮವಾರ ಮಧ್ಯರಾತ್ರಿ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ತಮ್ಮ ಸ್ವಗೃಹದಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
1936 ಆಗಸ್ಟ್ 26 ರಂದು ದಾರದಹಳ್ಳಿ ಗ್ರಾಮದ ಪಟೇಲ್ ಭೈರೇಗೌಡ ಹಾಗೂ ಪುಟ್ಟಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದ ಚಂದ್ರೇಗೌಡ ಆಪ್ತ ವಲಯದಲ್ಲಿ ಡಿಬಿಸಿ ಎಂದೇ ಜನಾನುರಾಗಿಯಾಗಿದ್ದರು.
1971ರಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಅವರು, ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರಾಗುವ ಮೂಲಕ ನಾಲ್ಕೂ ಸದನಗಳಲ್ಲಿ ಸದಸ್ಯರಾಗಿದ್ದರು.
2014ರಿಂದ ಈಚೆಗೆ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿದ್ದ ಅವರು, ದಾರದಹಳ್ಳಿಯ ತಮ್ಮ ‘ಪೂರ್ಣಚಂದ್ರ’ ನಿವಾಸದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಪತ್ನಿ ಪೂರ್ಣಿಮಾ ಹಾಗೂ ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಚಂದ್ರೇಗೌಡ ಅವರ ಪಾರ್ಥೀವ ಶರೀರವನ್ನು ಮಂಗಳವಾರ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆ ವರೆಗೆ ಮೂಡಿಗೆರೆ ಅಡ್ಯಂತಾಯ ರಂಗದಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ನಾಳೆ ದಾರದಹಳ್ಳಿಯ ಅವರ ಪೂರ್ಣಚಂದ್ರ ಎಸ್ಟೇಟ್ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ
ಬೆಳಗಾವಿ: ಮಾಜಿ ಸಚಿವ ಡಿ ಬಿ.ಚಂದ್ರೇಗೌಡ ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ನಾಲ್ಕು ಸದನಗಳನ್ನು ಪ್ರವೇಶಿಸಿದ್ದ ಅಪರೂಪದ ರಾಜಕಾರಣಿ ಎನಿಸಿಕೊಂಡಿದ್ದ ಗೌಡರು, ಮೂರು ಬಾರಿ ಸಂಸದರಾಗಿ, ಶಾಸಕರಾಗಿ ಜನ ಮನ್ನಣೆ ಗಳಿಸಿದ್ದರು. ಚಂದ್ರೇಗೌಡರ ನಿಧನದಿಂದ ಕರ್ನಾಟಕ ಓರ್ವ ಮುತ್ಸದಿ ರಾಜಕಾರಣಿಯನ್ನು ಕಳೆದುಕೊಂಡಂತೆ ಆಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗಾಗಿ ಚಿಕ್ಕ ಮಗಳೂರು ಲೋಕಸಭಾ ಸದಸ್ಯತ್ವ ಸ್ಥಾನವನ್ನು ತ್ಯಾಗ ಮಾಡಿದ್ದರು ಎಂದು ಸಚಿವರು ಸ್ಮರಿಸಿದ್ದಾರೆ. ಡಿ.ಬಿ. ಚಂದ್ರೇಗೌಡರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.