ಕಾರು ಚಾಲಕನ ಕೆಲಸದಿಂದ ವಜಾಗೊಳಿಸಿದ್ದೇ ಭೂ ವಿಜ್ಞಾನ ಅಧಿಕಾರಿ ಪ್ರತಿಮಾ ಹತ್ಯೆಗೆ ಕಾರಣ?
ಬೆಂಗಳೂರು: ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಬೆಂಗಳೂರು ಪೊಲೀಸರು ಓರ್ವ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಆತ ಪ್ರತಿಮಾ ಅವರ ಮಾಜಿ ಕಾರು ಚಾಲಕ ಎಂದು ಹೇಳಲಾಗಿದೆ.
ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ ಸಂಭದಿಸಿದಂತೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಬಂಧಿತ ವ್ಯಕ್ತಿಯನ್ನು ಪ್ರತಿಮಾ ಅವರ ಮಾಜಿ ಕಾರು ಚಾಲಕ ಕಿರಣ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ಸುಬ್ರಮಣ್ಯಪುರ ಪೊಲೀಸರು ಪ್ರತಿಮಾ ಕೊಲೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅದರಲ್ಲಿ ಕಿರಣ್ ಎಂಬಾತ ಪ್ರತಿಮಾ ಅವರ ಹಳೆ ಡ್ರೈವರ್ ಆಗಿದ್ದನು ಎಂಬುದು ತಿಳಿದುಬಂದಿದೆ.
ಪೊಲೀಸ್ ವಿಚಾರಣೆ ವೇಳೆ ಪ್ರತಿಮಾ ಒಂದು ವಾರದ ಹಿಂದೆ ಕಿರಣ್ನನ್ನು ಕೆಲಸದಿಂದ ತೆಗೆದಿದ್ದರು. ಕೆಲ ವಿಚಾರಗಳಿಗೆ ಪ್ರತಿಮಾ ಮತ್ತು ಕಿರಣ್ ನಡುವೆ ಭಿನ್ನಾಭಿಪ್ರಾಯ ಬಂದಿತ್ತು ಎಂದು ಹೇಳಲಾಗಿದೆ. ಕೆಲಸದಿಂದ ವಜಾಗೊಳಿಸಿದ್ದಕ್ಕೆ ಕೋಪಗೊಂಡಿದ್ದ ಕಿರಣ್ ಈ ಕೃತ್ಯ ವೆಸಗಿರಬಹುದು ಎಂದು ಹೇಳಲಾಗಿದ್ದು, ಸದ್ಯ ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.