ಸಾಹಿತಿಗಳು ಪ್ರಭುತ್ವವನ್ನು ಪ್ರಶ್ನಿಸುವುದು ಬಹು ಮುಖ್ಯ:ಹೇಮಾ ನಾಯ್ಕ್
ಮಂಗಳೂರು, ನ.4: ಸಾಹಿತಿಗಳಾದ ಪ್ರಭುತ್ವದ ಪರ ನಿಲ್ಲುವುದರ ಬದಲು ಪ್ರಭುತ್ವವನ್ನು ಪ್ರಶ್ನಿಸುವುದು ಮತ್ತು ವಿರೋಧಿಸುವುದು ಈ ದುರಿತ ಕಾಲದಲ್ಲಿ ಬಹು ಮುಖ್ಯವಾಗಿದೆ ಎಂದು ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಹೇಮಾ ನಾಯ್ಕ್ ಅಭಿಪ್ರಾಯ ವ್ಯಕ್ತಪಡಿಸಿದರು.
ಶಕ್ತಿನಗರ ದ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯುತ್ತಿರುವ ಎರಡು ದಿನಗಳ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಂಕಣಿ ಸಾಹಿತ್ಯ ಮತ್ತು ಚಳವಳಿಯ ಇತಿಹಾಸವನ್ನು ಗಮನಿಸಿದರೆ ಮಹಿಳೆಯರನ್ನು ಕಡೆಗಣಿಸಿದ ಪ್ರಮೇಯವೇ ಕಂಡು ಬರುತ್ತದೆ. ಕೊಂಕಣಿ ಚಳವಳಿಯ ನೇತ್ರತ್ವ ವಹಿಸಿದಂತ ಹಿರಿಯರು ಹಿನ್ನೆಲೆಗೆ ಸರಿಯುತ್ತಿರುವಂತೆ ಈಗ ಚಳವಳಿಯ ನೇತೃತ್ವ ವಹಿಸಲು ಕಿರಿಯರು ಸಿಗುತ್ತಿಲ್ಲ. ಪ್ರಸಕ್ತ ಕಿರಿಯರು ಈ ಕೊಂಕಣಿ ಚಳವಳಿಯ ನೇತೃತ್ವ ವಹಿಸಲು ತಯಾರಾಗ ಬೇಕು ಮತ್ತು ಚಳವಳಿ ಯಲ್ಲಿ ಇರುವ ಹಿರಿಯರು ಅವರಿಗೆ ಮಾರ್ಗದರ್ಶನ ಮಾಡಿ ಅವರು ನೇತೃತ್ವ ವಹಿಸಲು ತಯಾರು ಮಾಡಬೇಕು ಎಂದು ಹೇಮಾ ನಾಯ್ಕ್ ಕರೆ ನೀಡಿದರು.
ವಿಷನ್ ಕೊಂಕಣಿ ಹೆಲ್ತ್ ಕಾರ್ಡ್ ಗೆ ಚಾಲನೆ
ಕೊಂಕಣಿ ಲೇಖಕರು, ಸಾಹಿತಿಗಳು ಮತ್ತು ಕಲಾವಿದರಿಗೆ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ವಿಷನ್ ಕೊಂಕಣಿ ಹೆಲ್ತ್ ಕಾರ್ಡ್ ಅನ್ನು ಶನಿವಾರ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲಿ ಚಾಲನೆ ನೀಡಲಾಯಿತು.
ನಗರದ ಶಕ್ತಿನಗರ ದ ವಿಶ್ವ ಕೊಂಕಣಿ ಕೇಂದ್ರದ ಬಸ್ತಿ ವಾಮನ್ ಶೆಣೈ ವೇದಿಕೆಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಮೈಕಲ್ ಡಿಸೋಜ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೊಂಕಣಿ ಸಾಹಿತಿ ಮತ್ತು ಕಲಾಕಾರರಿಗೆ ಸದಾ ನನ್ನ ಪ್ರೋತ್ಸಾಹ ಇದೆ. ಕೊಂಕಣಿ ಪುಸ್ತಕ ಗಳನ್ನು ಪ್ರಕಟಿಸಲು 40 ಲಕ್ಷ ರೂಪಾಯಿ ಮೊತ್ತ ದ ವಿಷನ್ ಕೊಂಕಣಿ ಪುಸ್ತಕ ಪ್ರಾಧಿಕಾರ ಸ್ಥಾಪಿಸಲಾಗಿದೆ. ಕೊಂಕಣಿ ಸಂಗೀತ ಮತ್ತು ಕೊಂಕಣಿ ಸಿನಿಮಾಕ್ಕಾಗಿ ಯೂ ವಿಶೇಷವಾದ ವ್ಯವಸ್ಥೆಯನ್ನು ಮಾಡಲಾಗಿದ್ದು ಅದು ಕೂಡ ವಿಷನ್ ಕೊಂಕಣಿ ಕಾರ್ಯಕ್ರಮದಲ್ಲಿ ಮುಂದುವರಿಯುತ್ತಿದೆ. ಪ್ರಸ್ತುತ ವರ್ಷದಿಂದ ವಿಷನ್ ಕೊಂಕಣಿ ಅಡಿ ಕೊಂಕಣಿ ಲೇಖಕರು, ಸಾಹಿತಿಗಳು ಮತ್ತು ಕಲಾ ವಿದರಿಗೆ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ವಿಷನ್ ಕೊಂಕಣಿ ಹೆಲ್ತ್ ಕಾರ್ಡ್ ಅನ್ನು ನಾವು ನೀಡುತ್ತಿದ್ದೇವೆ. ಕೊಂಕಣಿ ಸಾಹಿತಿ ಮತ್ತು ಕಲಾವಿದರು ಶೇ. 25ರವರೆಗೆ ಚಿಕಿತ್ಸೆಯಲ್ಲಿ ರಿಯಾಯಿತಿಯನ್ನು ಈ ಆಸ್ಪತ್ರೆ ಯಿಂದ ಪಡೆಯಬಹುದು. ಇದು ವಿಷನ್ ಕೊಂಕಣಿ ಹೆಲ್ತ್ ಕಾರ್ಡ್ ಸ್ಕೀಮ್ ಎಂದರು. ಫ್ಲೇವಿಯ ಡಿಸೋಜ ಉಪಸ್ಥಿತರಿದ್ದರು.