ಉಡುಪಿ: ಬಿಸಿಯೂಟ ನೌಕರರಿಂದ ನ.7-8 ರಂದು ಬೆಂಗಳೂರಿನಲ್ಲಿ ಮುಷ್ಕರ

ಉಡುಪಿ, ನ.4: ಶಾಲೆಯ ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ನೀಡಬೇಕು. ಅವರನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಿ ಸರಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯ ನೀಡಬೇಕು. 60 ವರ್ಷಕ್ಕೆ ನಿವೃತ್ತರಾಗುವವರಿಗೆ ಕನಿಷ್ಟ ಒಂದು ಲಕ್ಷ ರೂ. ಇಡುಗಂಟು ನೀಡುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯದ 1,20,000 ಬಿಸಿಯೂಟ ನೌಕರರು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಕಳೆದ ಅ.30ರಿಂದ ಬೆಂಗಳೂರಿನಲ್ಲಿ ನಡೆಸುತ್ತಿರುವ ವಿಧಾನಸೌಧ ಚಲೋ ಮುಷ್ಕರವನ್ನು ನ.7 ಮತ್ತು 8ರಂದು ಉಡುಪಿ ಜಿಲ್ಲೆಯ ಬಿಸಿಯೂಟ ನೌಕರರು ಮುಂದುವರಿಸುವರು ಎಂದು ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷೆ ಜಯಶ್ರೀ ಪಡುಕೆರೆ ಹೇಳಿದ್ದಾರೆ.

ಇದಕ್ಕಾಗಿ ಉಡುಪಿ ಜಿಲ್ಲೆಯಲ್ಲಿರುವ 2000 ಮಂದಿ ಬಿಸಿಯೂಟ ತಯಾರಿಸುವ ಸಿಬ್ಬಂದಿಗಳು ಈ ಎರಡು ದಿನಗಳಂದು ಜಿಲ್ಲೆಯಲ್ಲಿ ಬಿಸಿಯೂಟ ತಯಾರಿಯನ್ನು ಸಂಪೂರ್ಣ ನಿಲ್ಲಿಸಿ ಬೆಂಗಳೂರಿನ ಮುಷ್ಕರದಲ್ಲಿ ಪಾಲ್ಗೊಳ್ಳುವರು. ನ.9ರಿಂದ ಮತ್ತೆ ಬಿಸಿಯೂಟ ತಯಾರಿಕೆ ಮುಂದುವರಿಸುವರು ಎಂದು ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

2002-02ನೇ ಸಾಲಿನಿಂದ ರಾಜ್ಯದ ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆ ಅಕ್ಷರದಾಸೋಹ ಯೋಜನೆ ಪ್ರಾರಂಭಗೊಂಡಿದೆ. ಇಂದು ರಾಜ್ಯದಲ್ಲಿ 56 ಲಕ್ಷ ಮಕ್ಕಳು ಬಿಸಿಯೂಟ ಸೇವಿಸುತಿದ್ದಾರೆ. ಅಂದು ತಿಂಗಳಿಗೆ 300-400ರೂ. ಗೌರವಧನಕ್ಕೆ ದುಡಿಯುತಿದ್ದ ಬಿಸಿಯೂಟ ತಯಾರಕರು ಹಾಗೂ ಸಹಾಯಕಿಯರಿಗೆ ಇಂದು ಸಿಗುತ್ತಿರುವುದು 3600 ಹಾಗೂ 3700ರೂ. ಮಾತ್ರ. ಕಳೆದ ವರ್ಷದ ಬಜೆಟ್‌ನಲ್ಲಿ ಗೌರವಧನವನ್ನು ಒಂದು ಸಾವಿರ ರೂ.ಹೆಚ್ಚಳ ಮಾಡಿರುವು ದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದರೂ, ಅದಿನ್ನೂ ನಮಗೆ ಸಿಗುತ್ತಿಲ್ಲ. ಅದನ್ನು 2023ರಿಂದಲಾದರೂ ಜಾರಿಗೊಳಿಸಬೇಕು ಎಂದು ಜಯಶ್ರೀ ನುಡಿದರು.

ಆಗಸ್ಟ್‌ನಿಂದ ಗೌರವಧನ ಬಂದಿಲ್ಲ: ಸರಕಾರ ನೀಡುವ ಗೌರವಧನವನ್ನೂ ಪ್ರತಿ ತಿಂಗಳು ನೀಡುತ್ತಿಲ್ಲ. 2-3 ತಿಂಗಳಿ ಗೊಮ್ಮೆ ಅದು ಸಿಗುತ್ತಿದೆ. ಇದರಿಂದ ಜೀವನ ಸಾಗಿಸುವುದು ನಮಗೆ ಕಷ್ಟವಾಗಿದೆ. ಇದರೊಂದಿಗೆ ಆಧಾರ್ ಹಾಗೂ ಇತರ ತಾಂತ್ರಿಕ ಕಾರಣಗಳಿಗಾಗಿ ಕೆಲವು ನೌಕರರ ಬ್ಯಾಂಕ್ ಖಾತೆಗಳಿಗೆ ಹಣವೂ ಜಮೆಯಾಗುತ್ತಿಲ್ಲ. ಉಡುಪಿ ಹಾಗೂ ಕಾರ್ಕಳ ತಾಲೂಕುಗಳ ನೌಕರರಿಗೆ ಕಳೆದ ಆಗಸ್ಟ್ ತಿಂಗಳಿನಿಂದ ಗೌರವಧನ ಸಿಕ್ಕಿಲ್ಲ ಎಂದರು.

ಯೋಜನೆಯ ಪ್ರಾರಂಭದಲ್ಲಿ ಮಕ್ಕಳ ಅನುಪಾತಕ್ಕನು ಗುಣವಾಗಿ ಅಡುಗೆಯವರ ಸಂಖ್ಯೆ ಇತ್ತು. ಆದರೆ ಬಿಸಿಯೂಟವನ್ನು ಪ್ರೌಢ ಶಾಲೆಗಳಿಗೂ ವಿಸ್ತರಿಸಿದ ಬಳಿಕ ಈಗ ಅಡುಗೆಯವರ ಸಂಖ್ಯೆ ಹೆಚ್ಚಿಸಿಲ್ಲ. ಅಲ್ಲದೇ ಇದಕ್ಕೆ ಹೆಚ್ಚುವರಿಯಾಗಿ ಕ್ಷೀರ ಭಾಗ್ಯ, ಮೊಟ್ಟೆ ಭಾಗ್ಯದ ಹೊಣೆಯೂ ನಮ್ಮದೇ ತಲೆಯ ಮೇಲೆ ಬಂದಿದೆ. ಇದರಿಂದ ಅಡುಗೆಗೆ ಸಂಬಂಧಿಸಿದ ಇತರೆಲ್ಲ ಜವಾಬ್ದಾರಿಯನ್ನು ನಾವೇ ನಿಭಾಯಿಸಬೇಕಿದೆ. ಮೊಟ್ಟೆ ಹಾಳಾದರೆ ಬದಲಿಯಾಗಿ ನಾವೇ ಮಕ್ಕಳಿಗೆ ಮೊಟ್ಟೆ ನೀಡಬೇಕಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸುನಂದ ತಿಳಿಸಿದರು.

ಕಳೆದ 19-20 ವರ್ಷ ಬಿಸಿಯೂಟದ ನೌಕರರಾಗಿ ದುಡಿದ 60 ವರ್ಷ ತುಂಬಿದ ಮಹಿಳೆಯರನ್ನು ಬಿಡಿಗಾಸು ನೀಡದೇ ಮನೆಗೆ ಕಳುಹಿಸಲಾಗಿದೆ. ಪ್ರಾರಂಭದಲ್ಲಿ ನಮಗೆ ನಾಲ್ಕು ಗಂಟೆಗಳ ಕೆಲಸ ನಿಗದಿಯಾಗಿದ್ದರೆ, ಈಗ ಅದು 6ರಿಂದ ಆರೂವರೆ ಗಂಟೆಯ ಕೆಲಸವಾಗುತ್ತಿದೆ. ಆದರೆ ಕನಿಷ್ಠ ವೇತನ ಕಾಯ್ದೆ ಈಗಲೂ ನಮಗೆ ಅನ್ವಯವಾಗುತ್ತಿಲ್ಲ ಎಂದು ಸುನಂದ ಬೇಸರದಿಂದ ನುಡಿದರು.

ಬಿಸಿಯೂಟ ತಯಾರಿಸುವಾಗ ಅವಘಡ ಸಂಭವಿಸಿದರೂ ಯಾವುದೇ ಪರಿಹಾರ ಸರಕಾರದಿಂದ ಸಿಗುತ್ತಿಲ್ಲ. ಹೀಗಾಗಿ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಬಿಸಿಯೂಟ ನೌಕರರು ತಮ್ಮ ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನಲ್ಲಿ ಸರದಿಯಂತೆ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳುತಿದ್ದಾರೆ. ಉಡುಪಿ ಜಿಲ್ಲೆಯ ನೌಕರರು ನ.7-8ರಂದು ಇದರಲ್ಲಿ ಪಾಲ್ಗೊಳ್ಳುವರು. ಇದಕ್ಕೆ ಸಂಬಂಧಿತ ಎಲ್ಲರ ಸಹಕಾರವನ್ನು ಕೋರಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಜಯಶ್ರೀ ಉಡುಪಿ, ಸಿಂಗಾರಿ, ಸಿಐಟಿಯು ನಾಯಕರಾದ ಬಾಲಕೃಷ್ಣ ಶೆಟ್ಟಿ ಹಾಗೂ ಸುರೇಶ್ ಕಲ್ಲಾಗರ ಉಪಸ್ಥಿತರಿದ್ದರು.

ಬಿಸಿಯೂಟ ನೌಕರರ ಪ್ರಮುಖ ಬೇಡಿಕೆ

*ಅಕ್ಷರ ದಾಸೋಹ ಯೋಜನೆ ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿ ನಡೆಯಬೇಕು.

*ಕಳೆದ ಬಜೆಟ್‌ನಲ್ಲಿ ಘೋಷಿಸಿದ 1000ರೂ. ವೇತನವನ್ನು ಕೂಡಲೇ ಜಾರಿಗೊಳಿಸಬೇಕು.

*ಬಿಸಿಯೂಟ ನೌಕರರ ಕೆಲಸದ ಅವಧಿಯನ್ನು 4ಗಂಟೆಯಿಂದ 6 ಗಂಟೆಗೆ ಅಕ್ಷರ ದಾಸೋಹ ಕೈಪಿಡಿಯಲ್ಲಿ ತಿದ್ದುಪಡಿ ಮಾಡಬೇಕು. ಅವರನ್ನು ಗ್ರೂಪ್ ಡಿ ನೌಕರರೆಂದು ಪರಿಗಣಿಸಿ ಎಲ್ಲಾ ಸೌಲಭ್ಯ ನೀಡಬೇಕು.

*ವರ್ಷದಲ್ಲಿ 10 ತಿಂಗಳ ವೇತನದ ಬದಲು 12 ತಿಂಗಳ ವೇತನ ನೀಡಬೇಕು. ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿ ಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್‌ಡಿಎಂಸಿಗೆ ವರ್ಗಾವಣೆ ಮಾಡಿದ ಕ್ರಮವನ್ನು ಹಿಂದಕ್ಕೆ ಪಡೆಯಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆಯವರು ಇರಲೇ ಬೇಕು.

Leave a Reply

Your email address will not be published. Required fields are marked *

error: Content is protected !!