ಎನ್‌ಡಿಎಯಿಂದ ಆಚೆ ಬಂದು ಕುಮಾರಸ್ವಾಮಿ ನನಗೆ ಬೆಂಬಲ ನೀಡಲಿ- ಡಿ.ಕೆ.ಶಿವಕುಮಾರ್

ಬೆಂಗಳೂರು: ಕುಮಾರಸ್ವಾಮಿ ಅವರು ಎನ್ ಡಿಎ ಮೈತ್ರಿಕೂಟದವವರು. ನಮಗೂ ಎನ್ ಡಿಎಗೂ ಸಂಬಂಧವಿಲ್ಲ. ಮೊದಲು ಎನ್ ಡಿಎಯಿಂದ ಆಚೆ ಬಂದು ನಂತರ ಬೆಂಬಲದ ಬಗ್ಗೆ ಮಾತನಾಡಲಿ. ಅವರು ಬೆಂಬಲ ನೀಡುವ ಕಾಲದಲ್ಲೇ ಬೆಂಬಲ ನೀಡಲಿಲ್ಲ. ಈಗೇನು ಬೆಂಬಲ ನೀಡುತ್ತಾರೆ?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಎಚ್,ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ಶಿವಕುಮಾರ್ ಅವರು ನಾಳೆಯೇ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ 19 ಶಾಸಕರ ಬೆಂಬಲ ನೀಡುತ್ತೇವೆ’ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳು ಕುಮಾರಕೃಪಾ ಅತಿಥಿ ಗೃಹದ ಬಳಿ ಶನಿವಾರ ಕೇಳಿದಾಗ ಈ ರೀತಿ ಉತ್ತರಿಸಿದರು.

ಕುಮಾರಸ್ವಾಮಿ ಅವರ ಮಾತು ಕೇಳಿ ಬಹಳ ಸಂತೋಷವಾಗಿದೆ. ಸದ್ಯ ನಮಗೆ ರಾಜ್ಯದ ಜನತೆ 136 ಸೀಟು ಜತೆ ಅಧಿಕಾರ ಕೊಟ್ಟಿದ್ದಾರೆ. ಅವರು ಉತ್ತಮ ವಿರೋಧ ಪಕ್ಷದ ನಾಯಕನಾಗಿ ಸರ್ಕಾರವನ್ನು ತಿದ್ದುವ ಕೆಲಸ ಮಾಡಲಿ. ಟೀಕೆ ಮಾಡುವುದನ್ನು ಬಿಟ್ಟು, ಸರ್ಕಾರವನ್ನು ತಿದ್ದಲಿ. ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಒಂದೊಂದು ಬಾರಿ ಅವರನ್ನು ಮುಖ್ಯಮಂತ್ರಿ ಮಾಡಿದೆ. ಅವರ ತಂದೆಯವರನ್ನು ಕಾಂಗ್ರೆಸ್ ಪ್ರಧಾನಮಂತ್ರಿ ಮಾಡಿದೆ. ಅವರಿಗಿರುವ ಅಪಾರ ಅನುಭವದ ಮೂಲಕ ನಮಗೆ ಮಾರ್ಗದರ್ಶನ ನೀಡಲಿ. ಈಗ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ನಮಸ್ಕಾರ ಎಂದರು.

Leave a Reply

Your email address will not be published. Required fields are marked *

error: Content is protected !!