50 ಕಾಂಗ್ರೆಸ್ ಶಾಸಕರು ಬಿಜೆಪಿ ಹೈಕಮಾಂಡ್ ಸಂಪರ್ಕದಲ್ಲಿ- ನಿರಾಣಿ ಸ್ಪೋಟಕ ಹೇಳಿಕೆ
ವಿಜಯಪುರ: ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಭಾರಿ ಗೊಂದಲವಿದ್ದು, ಅಧಿಕಾರ ವಂಚಿತರಿಂದ ರಾಜ್ಯದ ಸರ್ಕಾರ ಪತನವಾಗಲಿದೆ. 50ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಬಿಜೆಪಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಇಂದು ಬಿಜೆಪಿ ಬರ ಅಧ್ಯಯನಕ್ಕಾಗಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಅನುಭವದಲ್ಲಿ ಹೇಳುವುದಾದರೆ ಐದು ವರ್ಷ ಈ ಸರ್ಕಾರ ಅಧಿಕಾರ ನಡೆಸಲಾಗದೆ ಪತನವಾಗಲಿದೆ. ರಾಜ್ಯದಲ್ಲಿ ಶೀಘ್ರವೇ ಜನಪರ ಆಡಳಿತದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಉಪಮುಖ್ಯಮಂತ್ರಿ ಸ್ಥಾನ ಸಿಗದ ಅತೃಪ್ತರು, ಸಚಿವ ಸ್ಥಾನದ ಆಕಾಂಕ್ಷಿಗಳು ಹಾಗೂ ಮೊದಲ ಬಾರಿ ಶಾಸಕರಾದವರ ಕ್ಷೇತ್ರಕ್ಕೆ ಅನುದಾನ ಸಿಕ್ಕಿಲ್ಲ. ಇಂಥ ಅತೃಪ್ತರಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ, ಯಾರ್ಯಾರು ಹೊರ ಬರಲಿದ್ದಾರೆ ಎಂದು ನೋಡಿ ಎಂದರು.
ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿಯಿದ್ದು, ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ವಿದ್ಯುತ್ ಕ್ಷಾಮವೂ ಆವಿರಿಸಿದೆ. ಇಂಥ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸಬೇಕಿದ್ದ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆದಿದೆ. ಮೇಲ್ನೋಟಕ್ಕೆ ಎರಡು ಬಣಗಳಂತೆ ಕಂಡರೂ ಕಾಂಗ್ರೆಸ್ ಸರ್ಕಾರದಲ್ಲಿ 4 ಬಣಗಳಿವೆ ಎಂದು ನಿರಾಣಿ ಟೀಕಿಸಿದರು.
ಐದು ವರ್ಷ ನಾನೇ ಮುಖ್ಯಮಂತ್ರಿ ಎಂದಿದ್ದ ಸಿದ್ಧರಾಮಯ್ಯ ಇದೀಗ ಉಲ್ಟಾ ಹೊಡೆದಿದ್ದಾರೆ. ಅವರ ನಾಲಿಗೆಗೂ, ತಲೆಗೂ ಸಂಪರ್ಕ ಕಳೆದುಕೊಂಡಿದೆ. ಹೀಗಾಗಿ ಏನೇನೋ ಮಾತನಾಡುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದರು.