ಮುಂದಿನ 5 ವರ್ಷ ನಾನೇ ಸಿಎಂ ಹೇಳಿಕೆಯಿಂದ ಯೂಟರ್ನ್ ಹೊಡೆದ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕಳೆದ ಕೆಲವು ದಿನಗಳಿಂದ ಮತ್ತೆ ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ನಡುವಲ್ಲೇ ಮುಂದಿನ 5 ವರ್ಷ ನಾನೇ ಸಿಎಂ ಎಂದು ಹೇಳಿದ್ದ ಸಿದ್ದರಾಮಯ್ಯ ಅವರು, ಇದೀಗ ಯೂ ಟರ್ನ್ ಹೊಡೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಹೈಕಮಾಂಡ್ ಪಕ್ಷ. ನಾನು ನೀಡಿದ್ದ ಹೇಳಿಕೆಯೇ ಬೇರೆ. ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದೆ. ಆದರೆ, ತಪ್ಪಾಗಿ ವರದಿಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಗುರುವಾರ ವಿಜಯನಗರದಲ್ಲಿ ಮಾತನಾಡಿದ್ದ ಸಿಎಂ, 5 ವರ್ಷ ನಮ್ಮದೇ ಸರ್ಕಾರ ಇರುತ್ತದೆ. ಈಗ ನಾನು ಮುಖ್ಯಮಂತ್ರಿ, ನಾನೇ ಮುಂದುವರಿಯುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ನೀಡಿದ ಬಳಿಕ ಶುಕ್ರವಾರ ಗದಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಂದೇ ವೇದಿಕೆಯಲ್ಲಿ ಕುಳಿತಿದ್ದರೂ ಪರಸ್ಪರ ಮಾತನಾಡಿರಲಿಲ್ಲ. ಇಬ್ಬರೂ ಕಾರ್ಯಾಕ್ರಮದ ಆರಂಭದಿಂದ ಅಂತ್ಯದವರೆಗೂ ತುಟಿ ಬಿಚ್ಚದೇ ಇದ್ದದ್ದು ಹಲವರ ಹುಬ್ಬೇರುವಂತೆ ಮಾಡಿತ್ತು. ಸಿಎಂ ಹೇಳಿಕೆಯಿಂದ ಡಿಕೆ.ಶಿವಕುಮಾರ್ ಮುನಿಸಿಕೊಂಡಿರುವಂತೆ ಭಾಸವಾಗಿತ್ತು.