‘ಆಭರಣ’ ಮಳಿಗೆಯಲ್ಲಿ ನಾಲ್ಕು ದಿನದಿಂದ ಬೀಡು ಬಿಟ್ಟ ಐಟಿ ಅಧಿಕಾರಿಗಳು!
ಉಡುಪಿ: ಆದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದ ನಗರದ ಪ್ರಸಿದ್ಧ ಚಿನ್ನಾಭರಣ ಮಳಿಗೆಯಲ್ಲಿನ ಪರಿಶೀಲನೆ ನಾಲ್ಕನೇ ದಿನವಾದರೂ ಇನ್ನೂ ಮುಂದುವರಿದಿದೆ.
ಉಡುಪಿ ನಗರದಲ್ಲಿ ಕಾರ್ಯಾಚರಿಸುತ್ತಿದ್ದ ಚಿನ್ನಾಭರಣ, ಬೆಳ್ಳಿ, ವಜ್ರ ಹಾಗೂ ಆಭರಣ ತಯಾರಿಕಾ ಘಟಕ ಸಹಿತ ರಾಜ್ಯದ 14 ಆಭರಣ ಮಳಿಗೆಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿ ಐಟಿ ಇಲಾಖೆ ಅಧಿಕಾರಿಗಳು ಸರಕಾರಕ್ಕೆ ತೆರಿಗೆ ವಂಚಿಸಿರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ದಾಳಿಯಲ್ಲಿ ದೆಹಲಿ ಮುಖ್ಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಹಿತ ತಮಿಳುನಾಡು, ಬೆಂಗಳೂರು, ಮಂಗಳೂರು, ಉಡುಪಿ ಗೋವಾದ ಅಧಿಕಾರಿಗಳ ತಂಡ ಆಭರಣ ಮಳಿಗೆ ಮುಚ್ಚಿ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದೆ.
ಕಳೆದ ಮಂಗಳವಾರ ಮಾಲಕರ ಮನೆ, ಮಳಿಗೆಯ ವ್ಯವಸ್ಥಾಪಕರ ಮನೆ, ಆಭರಣ ತಯಾರಕ ಘಟಕದ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ನಾಲ್ಕೂ ದಿನವಾದರೂ ತೆರಿಗೆ ವಂಚನೆಯ ಬಗ್ಗೆ ಮತ್ತು ಸ್ಟಾಕ್‌ಗಳ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದೆ.
ಈ ರೀತಿಯ ದೊಡ್ಡ ಮಟ್ಟದ ದಾಳಿ ರಾಜ್ಯದಲ್ಲಿ ಇದೇ ಮೊದಲು ಎನ್ನುತ್ತಾರೆ ಆದಾಯ ಇಲಾಖೆಯ ಸಿಬ್ಬಂದಿಗಳು. ದಾಳಿ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳ ರಕ್ಷಣೆ ಹೆಚ್ಚುವರಿ ಪೊಲೀಸ್ ನಿಯೋಜನೆ ಕೂಡ ಹಿರಿಯ ಅಧಿಕಾರಿಗಳು ಮಾಡಿದ್ದಾರೆ.