ಬಿಎಸ್‌ವೈ ಕರ್ನಾಟಕದಲ್ಲಿ ರಾಜಾ ಹುಲಿ, ಮೋದಿಯವರ ಮುಂದೆ ಇಲಿ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಬೆಂಗಳೂರು: ʼʼಬಿ.ಎಸ್.ಯಡಿಯೂರಪ್ಪನವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರೂ ಹೊತ್ತು ಹಾಡಿ ಹೊಗಳುತ್ತಿದ್ದಾರೆ. ಹೀಗಿದ್ದರೂ ಈಗಲೂ ಅವರಿಗೆ ಕೂತು ನಿರಾಳವಾಗಿ ಮಾತನಾಡಲು ಮೋದಿಯವರು ಒಂದು ಅಪಾಯ್ಟ್‌ಮೆಂಟ್ ಕೊಡುತ್ತಿಲ್ಲ. ದೆಹಲಿಗೆ ಹೋಗಿ ದಿನಗಟ್ಟಲೆ ಅವರು ಕಾಯಬೇಕಾಗುತ್ತದೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಸಂಬಂಧ X ನಲ್ಲಿ ಪ್ರತಿಕ್ರಿಯಿಸಿರುವ, ʼʼಕರ್ನಾಟಕದಲ್ಲಿ ರಾಜಾ ಹುಲಿ ಎಂದು ಕರೆಸಿಕೊಳ್ಳುವ ಬಿಎಸ್ ವೈ ಅವರು ನರೇಂದ್ರ ಮೋದಿಯವರ ಮುಂದೆ ಇಲಿಯಂತೆ ವರ್ತಿಸುವುದು ಅವರ ವ್ಯಕ್ತಿತ್ವಕ್ಕೆ ಭೂಷಣ ಅಲ್ಲʼʼ ಎಂದು ಹೇಳಿದ್ದಾರೆ.
ʼʼಮೊನ್ನೆ ಮೊನ್ನೆಯವರೆಗೆ ಆರೆಸ್ಸೆಸ್, ಬಿಜೆಪಿ ಮತ್ತು ನರೇಂದ್ರಮೋದಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರು ಆಗಿರುವ ಹೆಚ್.ಡಿ ಕುಮಾರಸ್ವಾಮಿ ಅವರು ಹಿಗ್ಗಾಮುಗ್ಗಾ ಬೈದಾಡುತ್ತಿದ್ದರು. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಕುಮಾರಸ್ವಾಮಿಯವರ ನ್ನು ಕರೆಸಿ ಮಾತನಾಡಿ ಬೆನ್ನು ತಟ್ಟಿ ಕಳುಹಿಸುತ್ತಾರೆ. ಕುಮಾರಸ್ವಾಮಿ ಬೈದಾಡಿದ್ದು ಮೋದಿಯವರಿಗೆ ತಿಳಿದಿರಲಿಲ್ಲವೇ? ಇದ್ಯಾವ ಸೀಮೆಯ ಸ್ವಾಭಿಮಾನಿ ನಡವಳಿಕೆʼʼ ಕಿಡಿಕಾರಿದ್ದಾರೆ.
ʼʼಪ್ರಧಾನಿ ಮೋದಿ ಅವರು ವಿರೋಧ ಪಕ್ಷದ ನಾಯಕರನ್ನು ನಡೆಸಿಕೊಳ್ಳುವ ರೀತಿ ಬಗ್ಗೆ ನನಗೆ ತೀವ್ರ ಅಸಮಾಧಾನ ಇದೆ. ಇದಕ್ಕಿಂತಲೂ ಅಸಮಾಧಾನ ಎಲ್.ಕೆ.ಅಡ್ವಾಣಿ, ಬಿ.ಎಸ್. ಯಡಿಯೂರಪ್ಪನವರಂ ತಹ ತಮ್ಮದೇ ಪಕ್ಷದ ಹಿರಿಯ ನಾಯಕರನ್ನು ನಡೆಸಿಕೊಳ್ಳುವ ಬಗ್ಗೆಯೂ ಇದೆ. ಯಡಿಯೂರಪ್ಪನವರೇ, ನೀವು ನಿಮ್ಮ ನಾಯಕರ ಮೇಲೆ ಬರಪೂರ ಹೊಗಳಿಕೆಯ ಮಳೆ ಸುರಿಸಿ, ಮನಸ್ಸಿಗೆ ತೃಪ್ತಿ ಆಗುವಷ್ಟು ಓಲೈಸಿ, ಬೇಕಿದ್ದರೆ ಕಾಲುಗಳನ್ನು ಬೇಕಾದರೂ ಹಿಡಿಯಿರಿ, ನಮಗೇನು ಅಭ್ಯಂತರ ಇಲ್ಲ. ಅದರಿಂದಾದರೂ ರಾಜ್ಯದ ಜನತೆಗೆ ನ್ಯಾಯ ಸಿಗಲಿʼʼ ಎಂದು ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.