ಸಾಂಪ್ರದಾಯಿಕ ಮರಳುಗಾರಿಕೆ ಆರಂಭಿಸುವಲ್ಲಿ ಸರ್ಕಾರದ ಅನಗತ್ಯ ವಿಳಂಬ ನೀತಿ: ಕಾಮತ್

ಮಂಗಳೂರು: ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡು ಹಲವು ತಿಂಗಳುಗಳೇ ಕಳೆದಿವೆ. ಈ ಬಾರಿಯ ಸರ್ವೆಯಲ್ಲಿ ನೇತ್ರಾವತಿ ಹಾಗೂ ಫಲ್ಗುಣಿ ನದಿಯಲ್ಲಿ ಹೊಸದಾಗಿ ಗುರುತಿಸಿರುವ ಮರಳು ದಿಬ್ಬಗಳ ವರದಿಯ ಬಗ್ಗೆ ಎನ್‌ಐಟಿಕೆ ಸಲ್ಲಿಸಿರುವ ತಾಂತ್ರಿಕ ವರದಿಯನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿರುವ CRZ(ಕರಾವಳಿ ನಿಯಂತ್ರಣ ವಲಯ) 7 ಜನ ಸದಸ್ಯರನ್ನೊಳಗೊಂಡ ಸಮಿತಿ, ಪರಿಶೀಲನೆ ನಡೆಸಿ ಮರಳುಗಾರಿಕೆಗೆ ಅನುಮತಿಸುವ ಬಗ್ಗೆ ಬೆಂಗಳೂರಿನ ಕೆಸಿಝಡ್‌ಎಂಎಗೆ (ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ) ಕಳುಹಿಸಿಕೊಡಲಾಗಿದೆ.

ಪರಿಸರಾತ್ಮಕ ಕಾರಣಗಳಿಂದ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ಆರಂಭಿಸಲು ಕೆಸಿಝಡ್‌ಎಂಎ ಅನುಮತಿ ಅಗತ್ಯ. ಅದರಂತೆ ಈಗಾಗಲೇ ಜಿಲ್ಲಾಡಳಿತದ ಹಂತದಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಪೂರೈಸಿ ವರದಿಯನ್ನು ಕೆಸಿಝಡ್‌ಎಂಎ ಗೆ ಕಳುಹಿಸಲಾಗಿದ್ದರೂ ನಿಗದಿತ ಸಮಯದೊಳಗೆ ಸಭೆ ನಡೆಸಿ ಅನುಮತಿ ನೀಡದೇ ಅನಗತ್ಯ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ಶೀಘ್ರದಲ್ಲಿ ಆರಂಭಗೊಳ್ಳದಿದ್ದರೆ ಮರಳು ಕೊರತೆಯಿಂದಾಗಿ ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಸಹಜವಾಗಿ ಇದನ್ನೇ ನಂಬಿ ಬದುಕು ನಡೆಸುವ ಕಾರ್ಮಿಕ ಕುಟುಂಬಗಳು ಅತೀವ ಸಂಕಷ್ಟ ಎದುರಿಸಲಿವೆ. ಈಗಾಗಲೇ ದುಬಾರಿ ದರದಿಂದಾಗಿ ಜನಸಾಮಾನ್ಯರಿಗೆ ಮರಳು ಖರೀದಿಸಲೂ ಆಗುತ್ತಿಲ್ಲ. ಜಿಲ್ಲೆಯ ಜನತೆಯ ಈ ಸಂಕಷ್ಟಕ್ಕೆ ರಾಜ್ಯ ಸರಕಾರದ ನಿರ್ಲಕ್ಷ್ಯ, ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನವೇ ನೇರ ಕಾರಣ. ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸುತ್ತೇನೆ.

ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟು ಹೋಗಿರುವ ಡಯಾಲಿಸಿಸ್ ಯಂತ್ರಗಳು… ಮಂಗಳೂರಿನ ಪ್ರಮುಖ ಸರ್ಕಾರಿ ಆಸ್ಪತ್ರೆ ವೆನ್ಲಾಕ್ ನಲ್ಲಿ ಒಟ್ಟು 23 ಡಯಾಲಿಸಿಸ್ ಯಂತ್ರಗಳಿದ್ದು ಅದರಲ್ಲಿ 9 ಯಂತ್ರಗಳು ಕೆಟ್ಟು ಹೋಗಿ 6 ತಿಂಗಳುಗಳೇ ಕಳೆದಿದೆ. ಅದಕ್ಕೆ ಸರಿಯಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳುಗಳು ಕಳೆಯುತ್ತಿದ್ದರೂ ಇದರ ದುರಸ್ಥಿಯಾಗಿಲ್ಲ. ಇದರಿಂದಾಗಿ ರೋಗಿಗಳಿಗೆ ಅಗತ್ಯಕ್ಕನುಗುಣವಾಗಿ ಬೇಡಿಕೆ ಇರುವಷ್ಟು ಡಯಾಲಿಸಿಸ್ ಯಂತ್ರ ಇಲ್ಲದೇ ವೈದ್ಯರು ಸಹ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ. ಈ ಬಗ್ಗೆ ತುರ್ತಾಗಿ ಗಮನ ಹರಿಸಬೇಕಿದ್ದ ಸರ್ಕಾರ ತನ್ನ ನಿರ್ಲಕ್ಷ್ಯ ಧೋರಣೆಯಿಂದಾಗಿ ಸಾಕಷ್ಟು ರೋಗಿಗಳು ಪರದಾಡು ವಂತಾಗಿದೆ. ಕೆಟ್ಟು ಹೋಗಿರುವ ಯಂತ್ರದ ಬದಲಿಗೆ ಹೊಸ ಯಂತ್ರ ಖರೀದಿಸಿ ನೀಡಲಾಗುವುದು ಎಂದು ಸರ್ಕಾರ ವೆನ್ಲಾಕ್ ಆಸ್ಪತ್ರೆಗೆ ಭರವಸೆ ನೀಡಿದ್ದರೂ ಅದು ಕೇವಲ ಈವರೆಗೆ ಭರವಸೆಯಾಗಿಯೇ ಉಳಿದಿದೆ. ಸರ್ಕಾರ ಕೂಡಲೇ ಈ ಬಗ್ಗೆ ಗಮನಹರಿಸಿ ರೋಗಿಗಳ ಹಿತದೃಷ್ಟಿಯನ್ನು ಕಾಪಾಡಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ.

ಕದ್ರಿ ಪಾರ್ಕ್‌ನ ಹೊರಗಡೆ ಇರುವ ಮಳಿಗೆಗಳಲ್ಲಿ ಸ್ವಜನಪಕ್ಷ ಭೀತಿ… ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಇಷ್ಟು ದಿನಗಳಾದರೂ, ಕದ್ರಿ ಪಾರ್ಕಿನ ಹೊರಗಡೆ ಉದ್ಘಾಟನೆಗೊಂಡಿರುವ ಮಳಿಗೆಗಳ ಬಗ್ಗೆ ಈ ವರೆಗೂ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದ್ದು ಸ್ವಜನ ಪಕ್ಷಪಾತದ ಅನುಮಾನ ಮೂಡಿಸಿದೆ. ಕಾಂಗ್ರೆಸ್ಸಿನವರು ಅಧಿಕಾರ ದುರುಪಯೋಗ ಪಡಿಸಿಕೊಂಡು ತಮ್ಮ ಆಪ್ತ ಬಳಗದ ವ್ಯಾಪಾರೋದ್ಧಿಮೆದಾರರಿಗೇ ಆ ಮಳಿಗೆಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯ ಮೂಡಿದೆ. ಈ ವಿಷಯದಲ್ಲಿ ನ್ಯಾಯವಾಗಿ ದುಡಿಯುವ ಸಾರ್ವಜನಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅತಿ ಶೀಘ್ರದಲ್ಲಿ ಕಾನೂನು ಬದ್ಧವಾಗಿ ಇಲ್ಲಿನ ಮಳಿಗೆಗಳ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕು ಮತ್ತು ಯಾವುದೇ ಸ್ವಜನಪಕ್ಷಪಾತ ಅನುಸರಿಸದಂತೆ ಆಗ್ರಹಿಸುತ್ತೇನೆ

ವಿದ್ಯಾರ್ಥಿ ವೇತನದಲ್ಲಿ ವಿಳಂಬ… ಪರಿಶಿಷ್ಟ ಜಾತಿ/ಪಂಗಡದ ಹಾಗೂ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಈಗಾಗಲೇ SSP PORTAL (STATE SCHOLARSHIP PORTAL) ನಲ್ಲಿ ಈ ಹಿಂದಿನಂತೆ ಅರ್ಜಿ ಸಲ್ಲಿಸಿದ್ದರೂ ಇನ್ನೂ ಸಹ ವಿದ್ಯಾರ್ಥಿ ವೇತನ ಪಾವತಿ ಆಗಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಿದರೂ ಸೂಕ್ತ ಸ್ಪಂದನೆ ದೊರಕುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ, ವಿದ್ಯಾರ್ಥಿ ಸಂಘಟನೆಗಳಿಂದ ದೂರುಗಳು ಬರುತ್ತಿವೆ. ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಈಗಾಗಲೇ ಆಕ್ರೋಶ ಹೊರ ಹಾಕಿದ್ದು ಸರ್ಕಾರದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಕೂಡಲೇ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಆಗ್ರಹಿಸುತ್ತೇನೆ.

ಅಲ್ಪಸಂಖ್ಯಾತರ ಶ್ರಮಶಕ್ತಿ ಲೋನ್ ಸ್ಕೀಮ್:..
ಅಲ್ಪಸಂಖ್ಯಾತರ ಸ್ವ ಉದ್ಯೋಗಕ್ಕಾಗಿ ನೀಡುವ ಶ್ರಮಶಕ್ತಿ ಲೋನ್ ಸ್ಕೀಮ್ ನಲ್ಲಿ ಈ ಬಾರಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿರುವುದಕ್ಕೆ ಆ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ. ಕೇವಲ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿಯೇ 1728 ಅರ್ಜಿಗಳು ಬಂದಿದ್ದು ಅದರಲ್ಲಿ ಕೇವಲ 8 ಜನರಿಗೆ ಮಾತ್ರ ಯೋಜನೆಯ ಫಲಾನುಭವಿಯಾಗಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆಗೆ ಹೋಲಿಸಿದರೆ ಫಲಾನುಭವಿಗಳ ಸಂಖ್ಯೆ ಇಷ್ಟು ಗಣನೀಯವಾಗಿ ಇಳಿದಿದ್ದು ಇದೇ ಮೊದಲು.‌ಇದು ಅಲ್ಪಸಂಖ್ಯಾತರ ಹಿಂದುಳಿದವರ ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆ ಸಮುದಾಯಗಳಿಗೆ ಮಾಡುತ್ತಿರುವ ಅನ್ಯಾಯವಲ್ಲವೇ?

ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಕೊರತೆ
ನಮ್ಮ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಮಹಾತ್ಮ ಗಾಂಧಿ ನಗರ ವಿಕಾಸ್ ಯೋಜನೆಯಡಿ ಯಲ್ಲಿ 125 ಕೋಟಿ ಅನುದಾನವನ್ನು ತರಲಾಗಿತ್ತು. ಮಳೆ ಹಾನಿಯಿಂದ ಕ್ಷೇತ್ರದ ಅಲ್ಲಲ್ಲಿ ರಸ್ತೆ, ಡ್ರೈನೇಜ್ ನಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಮೂಲಭೂತ ಸೌಕರ್ಯ ಮರು ಕಲ್ಪಿಸಲು 20 ಕೋಟಿ ವಿಶೇಷ ಅನುದಾನವನ್ನು ತರಲಾಗಿತ್ತು. ಪ್ರಸ್ತುತ ಈ ಎಲ್ಲ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇಂದಿನ ಸರಕಾರ ಅನುದಾನಗಳನ್ನು ತಡೆಹಿಡಿದ ಪರಿಣಾಮ ಕ್ಷೇತ್ರದ ರಸ್ತೆಗಳ, ಚರಂಡಿಗಳ ಕಾಮಗಾರಿಗಳು ಅರ್ಧಕ್ಕೆ ನಿಂತು ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿ ದ್ದಾರೆ

ಇದಲ್ಲದೇ ನಮ್ಮ ಸರ್ಕಾರದ ಅವಧಿಯಲ್ಲಿ ಅಮೃತ ಯೋಜನೆ ಅಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರ ವತಿಯಿಂದ ಹಲವು ಅನುದಾನಗಳನ್ನು ತರಲಾಗಿತ್ತು. ಕುಡ್ಸೆಂಪ್ ಮೂಲಕ 200 ಕೋಟಿಗೂ ಹೆಚ್ಚು ಅನುದಾನ ತರಲಾಗಿದ್ದರೂ ಪ್ರಸ್ತುತ ಡ್ರೈನೇಜ್ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಈ ಬಗ್ಗೆ ಇಲಾಖೆಗೆ ಹಾಗೂ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಇನ್ನೂ ಸಹ ಯಾವುದೇ ಪ್ರಗತಿ ಕಂಡಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ 792 ಕೋಟಿ ರೂಪಾಯಿಯ ಕುಡಿಯುವ ನೀರಿನ ಜಲಸಿರಿ ಯೋಜನೆ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳಾದರೂ ಕಾಮಗಾರಿಗೆ ಅಗತ್ಯವಿರುವ ಅನುದಾನಕ್ಕೆ ಸರ್ಕಾರ ದಿಂದ ಸೂಕ್ತ ಸ್ಪಂದನೆಯೇ ದೊರಕುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಯಾವುದೇ ಹೊಸ ಕಾಮಗಾರಿಗೆ ಅನುದಾನ ಸಿಗುತ್ತಿಲ್ಲ. ಈ ಹಿಂದಿನ ಕಾಮಗಾರಿಗಳಿಗೆ ಈಗಾಗಲೇ ನಿಯೋಜನೆಗೊಂಡ ಅನುದಾನವನ್ನೂ ಸಹ ಬಿಡುಗಡೆ ಮಾಡುತ್ತಿಲ್ಲ. ಹೀಗಾದರೆ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ.?

ಒಟ್ಟಾರೆಯಾಗಿ ಸರ್ಕಾರ ಕರಾವಳಿಯಲ್ಲಿ ಅಭಿವೃದ್ಧಿ ಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಹಾಗೂ ಇಲ್ಲಿನ ಜನರು ಬಿಜೆಪಿಯ ಶಾಸಕರನ್ನು ಗೆಲ್ಲಿಸಿದ್ದಕ್ಕಾಗಿ ಸರ್ಕಾರ ಈ ರೀತಿಯಾಗಿ ವರ್ತಿಸುತ್ತಿದೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ಏನೋ ಷಡ್ಯಂತ್ರ ಇರುವ ಹಾಗೆ ಅನುಮಾನ ಮೂಡುತ್ತಿದೆ. ಹಾಗಾಗಿ ಈ ಕೂಡಲೇ ಎಲ್ಲಾ ಅನುದಾನಗಳನ್ನು ಬಿಡುಗಡೆಗೊಳಿಸಿ ಕಾಮಗಾರಿ ಮುಂದುವರಿಸಲು ಆದೇಶ ನೀಡಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ.

ಬಯೋಮೇಟ್ರಿಕ್ ವಂಚನೆ ಪ್ರಕರಣದ ಸಂತ್ರಸ್ತರಿಗೆ ಇನ್ನೂ ಸಿಗದ ನ್ಯಾಯ… ಮಂಗಳೂರಿನಲ್ಲಿ ಆಸ್ತಿ ಮಾರಾಟ ಹಾಗೂ ಖರೀದಿಸುವ ಸಂದರ್ಭದಲ್ಲಿ ಮಿನಿ ವಿಧಾನಸೌಧದ ಉಪನೋಂದಣಿ ಕಛೇರಿಯಲ್ಲಿ ಸರ್ಕಾರಿ ನಿಯಮಗಳನ್ನು ಪಾಲಿಸಿ ಬಯೋಮೆಟ್ರಿಕ್ ನೀಡಿದ ನಂತರ ಕೆಲವೇ ಗಂಟೆಗಳಲ್ಲಿ ಸಾರ್ವಜನಿಕರು ಗಳ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಡ್ರಾ ಆಗಿ ವಂಚನೆಯಾಗಿದ್ದ ಬಗ್ಗೆ ಮಾನ್ಯ ಕಂದಾಯ ಸಚಿವರಾದ ಕೃಷ್ಣಬೈರೇಗೌಡರ ಗಮನಕ್ಕೆ ತಂದು ಸರ್ಕಾರದ ವ್ಯವಸ್ಥೆಯ ನ್ಯೂನ್ಯತೆಯಿಂದಾಗಿಯೇ ಹಣ ಕಳೆದುಕೊಂಡ ಸಾರ್ವಜನಿಕರಿಗೆ ಸರ್ಕಾರವೇ ಪರಿಹಾರ ಒದಗಿಸಬೇಕು ಎಂದು ಸರಕಾರವನ್ನು ಆಗ್ರಹಿಸಲಾಗಿತ್ತು. ಆದರೆ ಈವರೆಗೂ ಜನಸಾಮಾನ್ಯರಿಗೆ ನ್ಯಾಯ ಸಿಕ್ಕಿಲ್ಲ.

ಸರ್ಕಾರಕ್ಕೆ ಮನವಿ ಸಲ್ಲಿಸಿದ ಮೇಲೆಯೂ ಬಗೆಹರಿಯದ ಇ-ಖಾತಾ ಸಮಸ್ಯೆ… ಮಂಗಳೂರಿನಲ್ಲಿ ಉಂಟಾಗಿರುವ ಇ-ಖಾತಾ ಸಮಸ್ಯೆಯನ್ನು ಆದ್ಯತೆ ಮೇರೆಗೆ ಅತ್ಯಂತ ತುರ್ತಾಗಿ ಸರಿಪಡಿಸಿಕೊಡುವಂತೆ ಅಕ್ಟೊಬರ್ 13 ರಂದು ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಆದರೆ ಈವರೆಗೂ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ. ಜನಸಾಮಾನ್ಯರ ಬವಣೆ ಮುಂದುವರೆದಿದೆ. ಆಳುವ ಸರ್ಕಾರಗಳು ಜನಸಾಮಾನ್ಯರನ್ನು ಹೀಗೆ ಕಡೆಗಣಿಸುವುದನ್ನು ಖಂಡಿಸುತ್ತೇನೆ.

ಹೀಗೆ ಸಮಸ್ಯೆಗಳ ಸರಮಾಲೆಯಿದ್ದು ರಾಜ್ಯ ಕಾಂಗ್ರೆಸ್‌ ಸರ್ಕಾರ ಇವೆಲ್ಲವನ್ನು ನಿರ್ಲಕ್ಷಿಸುತ್ತಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಸರ್ಕಾರ ಗಮನಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್‌ ಹೋರಾಟದ ಮೂಲಕ ಸರ್ಕಾರವನ್ನು ಸರಿ ದಾರಿಗೆ ತರುವ ಕೆಲಸ ಮಾಡಲಿದ್ದೇವೆ ಎಂದು ಶಾಸಕರಾದ ಡಿ.ವೇದವ್ಯಾಸ್‌ ಕಾಮತ್‌ ಅವರು ಎಚ್ಚರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಅಜಯ್ ರಾಜ್, ರಮೇಶ್ ಹೆಗ್ಡೆ, ರೂಪಾ.ಡಿ ಬಂಗೇರ, ವಿಜಯ್ ಕುಮಾರ್ ಶೆಟ್ಟಿ, ಸುರೇಂದ್ರ ಜೆ ಸಾಲ್ಯಾನ್, ಭಾಸ್ಕರ್ ಚಂದ್ರ ಶೆಟ್ಟಿ, ಕಿರಣ್ ರೈ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!