ಹೆಬ್ರಿ: ಸರಕಾರಿ ಕರ್ತವ್ಯಕ್ಕೆ ಅಡ್ಡಿ ಐವರ ವಿರುದ್ಧ ದೂರು ದಾಖಲು
ಉಡುಪಿ: ಹೆಬ್ರಿ ತಾಲೂಕು ನಾಡ್ಪಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಸನಮಕ್ಕಿ ಕಂಡಿಕಲ್ಲು ಎಂಬಲ್ಲಿ ಸರಕಾರಿ ಜಾಗ ಆತಿಕ್ರಮಿಸಿ ಮನೆ ಕಟ್ಟಿದ್ದನ್ನು ಕಂದಾಯ ನಿರೀಕ್ಷಕ ಮತ್ತು ಸರಕಾರಿ ಅಧಿಕಾರಿಗಳ ತಂಡ ಸ್ಥಳಕ್ಕೆ ಹೋದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಇತ್ತೀಚೆಗೆ ನಡೆದಿದೆ.
ಸುಧಾಕರ್ ಹೆಗ್ಡೆ ಎಂಬುವರು ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿ ಬೃಹತ್ ಬಂಗಲೆಯನ್ನು ನಿರ್ಮಿಸುತ್ತಿದ್ದರು. ತಾಲೂಕು ಪ್ರಭಾರ ತಹಸೀಲ್ದಾರ್ ಅನಂತಶಂಕರ ಅವರ ಸೂಚನೆಯ ಮೇರೆಗೆ ಕಂದಾಯ ನಿರೀಕ್ಷಕ ಹಿತೇಶ್ ಯು.ಬಿ ಯವರು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲು ಸ್ಥಳಕ್ಕೆ ಹೋದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ 5 ಜನರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಧಾಕರ ಹೆಗ್ಡೆ ಕಂಡಿಕಲ್ಲು, ಸುಜಾತ, ರತ್ನ, ವನಜ ಹೆಗ್ಗಡ್ತಿ, ಸುಜಾತ ಎಂಬುವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಂಚಾಂಗ ಹಾಕುವಾಗಲೇ ನೋಟಿಸ್…. ಕಂದಾಯ ಇಲಾಖೆಯ ವತಿಯಿಂದ ಪಂಚಾಂಗ ಹಾಕುವಾಗಲೇ ನೋಟಿಸ್ ನೀಡಲಾಗಿತ್ತು. ಆದರೆ ಸಂಬಂಧಪಟ್ಟವರು ನೋಟಿಸಿಗೆ ಕ್ಯಾರೆ ಮಾಡದೆ ಬೃಹತ್ ಬಂಗಲೆಯನ್ನು ನಿರ್ಮಿಸಿದ್ದಾರೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ನನ್ನ ಸೂಚನೆಯ ಮೇರೆಗೆ ಕಂದಾಯ ನಿರೀಕ್ಷಕ ಹಿತೇಶ್ ಮನೆ ತೆರವುಗೊಳಿಸಲು ಹೋದಾಗ ಮನೆಯವರು ಹಾಗೂ ಕೆಲವರು ಸೇರಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ. ಐದು ಜನದ ವಿರುದ್ಧ ಪ್ರಕರಣ ದಾಖಲಾಗಿದೆ. ಪಂಚಾಂಗ ಹಾಕುವಾಗಲೇ ಕಂದಾಯ ಇಲಾಖೆ ವತಿಯಿಂದ ನೋಟಿಸ್ ನೀಡಲಾಗಿತ್ತು. ಆದ್ದರಿಂದ ನಿಯಮಾನುಸಾರ ಅಕ್ರಮ ಕಟ್ಟಡವನ್ನು ತೆರವುಗೊಳಿಸಲು ಸೂಚಿಸಿದ್ದೆ:- ಅನಂತಶಂಕರ, ಹೆಬ್ರಿ, ತಹಸೀಲ್ದಾರ್.