ಮುಂದಿನ 5 ವರ್ಷ ನಾನೇ ಸಿಎಂ: ಸಿದ್ದರಾಮಯ್ಯ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದೆನು…?

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಕಾಂಗ್ರೆಸ್‌ ಪಾಳಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕಳೆದ ಕೆಲವು ದಿನಗಳಿಂದ ಮತ್ತೆ ಸಾಕಷ್ಟು ಚರ್ಚೆಯಾಗುತ್ತಿದ್ದು ಈ ಮಧ್ಯೆ ನಿನ್ನೆ ಹೊಸಪೇಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದು ಮತ್ತಷ್ಟು ಸಂಚಲನ ಮೂಡಿಸಿದೆ.

ಈ ಬಗ್ಗೆ ನಿನ್ನೆ ಮಾಧ್ಯಮ ಪ್ರತಿನಿಧಿಗಳು ಸಿಎಂ ಆಕಾಂಕ್ಷಿ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಬಳಿ ಪ್ರತಿಕ್ರಿಯೆ ಕೇಳಿದಾಗ, ಸಿದ್ದರಾಮಯ್ಯ ಹೇಳಿಕೆಗೆ ನಾನು ಬಹಿರಂಗವಾಗಿ ಮಾತನಾಡುವುದಿಲ್ಲ. ಪಕ್ಷದ ಹೈಕಮಾಂಡ್ ಹೇಳಿದ್ದನ್ನು ಪಾಲಿಸುವುದಷ್ಟೆ ನಮಗೆ ಗೊತ್ತು. ಒಂದಂತೂ ನಾನು ಮತ್ತೆ ಹೇಳಲು ಬಯಸುವುದೇನೆಂದರೆ ಕಾಂಗ್ರೆಸ್ ಪಕ್ಷದಲ್ಲಿ ಕಿತ್ತಾಟ ಇಲ್ಲ. ಕಿತ್ತಾಟ ಇರೋದು ಬಿಜೆಪಿಯಲ್ಲಿ. ಹೀಗಾಗಿ ವಿರೋಧ ಪಕ್ಷದ ನಾಯಕ ಆಯ್ಕೆ ಮಾಡಲು ಆಗಿಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದರು.

ಕಾಂಗ್ರೆಸ್ ನಾಯಕರು ಕಚ್ಚಾಡುತ್ತಿದ್ದಾರೆ ಎಂಬ ಮಾಜಿ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಯಾವುದೇ ಜಗಳ ಇಲ್ಲ. ಬಿಜೆಪಿ ಮುಖಂಡರು ತಮ್ಮ ವೈಫಲ್ಯ ಮುಚ್ಚಿಡಲು ಈ ರೀತಿ ಮಾತನಾಡುತ್ತಾರೆ. ನಮ್ಮ ಶಾಸಕರುಗಳಿಗೆ ಚಾಕೊಲೇಟ್ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು. ಆಪರೇಶನ್ ಕಮಲ ಮಾಡುತ್ತಿಲ್ಲ, ಬೇಕಾದರೆ ಅವರೇ ತನಿಖೆ ಮಾಡಿಸಲಿ ಎಂಬ ಯಡಿಯೂರಪ್ಪ ಹೇಳಿಕೆ ಕುರಿತು ಉತ್ತರಿಸಿದ ಅವರು, ಯಡಿಯೂರಪ್ಪ ಅವರ ಸಲಹೆ ಗಮನದಲ್ಲಿ ಇಟ್ಟುಕೊಳ್ಳುತ್ತೇವೆ ಎಂದರು. 

ಸಿದ್ದರಾಮಯ್ಯನವರು ಹೇಳಿದ್ದೇನು?: ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸರ್ಕಾರದಲ್ಲಿ ಅಧಿಕಾರ ಹಂಚಿಕೆ ವಿಷಯದಲ್ಲಿ ಶಾಸಕರು ಮತ್ತು ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಬಾರದು, ನೀಡಿದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಮೊನ್ನೆಯಷ್ಟೇ ಎಚ್ಚರಿಕೆ ನೀಡಿದ್ದರು. ಅದಾದ ಕೇವಲ ಒಂದು ದಿನ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಸರ್ಕಾರವನ್ನು ಮುನ್ನಡೆಸುತ್ತೇನೆ ಎಂದು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಘೋಷಿಸಿದ್ದಾರೆ.

ಇತ್ತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣಕ್ಕೆ ಸೇರಿದ ಸಚಿವರು ಮತ್ತು ಶಾಸಕರು ಶಿವಕುಮಾರ್ ಅವರು ಇನ್ನು ಒಂದು-ಒಂದೂವರೆ ವರ್ಷದಲ್ಲಿ ಮುಖ್ಯಮಂತ್ರಿಯಾಗಿ ಸರ್ಕಾರವನ್ನು ಮುನ್ನಡೆಸುತ್ತಾರೆ ಎಂದು ಆಗಾಗ್ಗೆ ಹೇಳುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಪಕ್ಷದ ಹೈಕಮಾಂಡ್‌ನ ದೃಢವಾದ ಬೆಂಬಲದಿಂದ ಉತ್ಸುಕರಾಗಿರುವ ಸಿದ್ದರಾಮಯ್ಯ ಅವರು, ಸದ್ಯ, ನಾನು ಸಿಎಂ ಮತ್ತು ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯುತ್ತೇನೆ ಎಂದರು. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಿದ್ದರಾಮಯ್ಯ, ಈ ನಿಟ್ಟಿನಲ್ಲಿ ಬಿಜೆಪಿಯವರು ವದಂತಿ ಹಬ್ಬಿಸುತ್ತಿದ್ದಾರೆ. ರಾಜ್ಯದ ಜನರು ಕಾಂಗ್ರೆಸ್‌ಗೆ ಸ್ಪಷ್ಟ ಜನಾದೇಶ ನೀಡಿದ್ದು, ಐದು ವರ್ಷಗಳ ಕಾಲ ತಮ್ಮ ಸರ್ಕಾರ ಸ್ಥಿರವಾಗಿರುತ್ತದೆ ಎಂದು ಹೇಳಿದರು.

ನಾಯಕತ್ವ ಬದಲಾವಣೆಯ ಬಗ್ಗೆ ಯಾರಾದರೂ ಮಾತನಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಬಾರದು. ಎಲ್ಲಾ ನಿರ್ಧಾರಗಳನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದ ನಿರ್ಧಾರದಿಂದ ಎಲ್ಲ ಶಾಸಕರು ಮತ್ತು ಮುಖಂಡರು ಸಂತಸಗೊಂಡಿದ್ದಾರೆ ಎಂದರು. 

ಮೂವರು ಡಿಸಿಎಂಗಳನ್ನು ನೇಮಿಸಲಾಗುತ್ತದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ಪ್ರಾದೇಶಿಕ ಪಕ್ಷವಲ್ಲ, ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷ. ಈ ಬಗ್ಗೆ ಯಾವುದೇ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂಬ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ಭವಿಷ್ಯವಾಣಿಗೆ ಪ್ರತಿಕ್ರಿಯಿಸಿದ ಅವರು, 135 ವಿಧಾನಸಭಾ ಸ್ಥಾನಗಳೊಂದಿಗೆ ಕಾಂಗ್ರೆಸ್ ಐದು ವರ್ಷಗಳ ಕಾಲ ರಾಜ್ಯವನ್ನು ಆಳುತ್ತದೆ, ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. 

Leave a Reply

Your email address will not be published. Required fields are marked *

error: Content is protected !!