ಅಮೆರಿಕಕ್ಕೆ ಅಕ್ರಮ ಪ್ರವೇಶ ಯತ್ನ: 97 ಸಾವಿರ ಭಾರತೀಯರ ಬಂಧನ!

ಅಹ್ಮದಾಬಾದ್: ಕಳೆದ ಒಂದು ವರ್ಷದ ಅವಧಿಯಲ್ಲಿ ಅಂದರೆ 2022ರ ಅಕ್ಟೋಬರ್‍‌ನಿಂದ 2023ರ ಸೆಪ್ಟೆಂಬರ್ ವರೆಗೆ ಅಮೆರಿಕಕ್ಕೆ ಅಕ್ರಮ ಪ್ರವೇಶ ಪಡೆಯಲು ಯತ್ನಿಸಿದ ದಾಖಲೆ ಸಂಖ್ಯೆಯ 96917 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ಸಂರಕ್ಷಣೆ ವಿಭಾಗ (ಯುಸಿಬಿಪಿ) ಅಂಕಿ ಅಂಶ ಬಹಿರಂಗಪಡಿಸಿದೆ.

ದುರ್ಗಮ ಹಾದಿಯಲ್ಲಿ ಇಂಥ ನುಸುಳುವಿಕೆ ಅವಧಿಯಲ್ಲಿ ಜೀವಹಾನಿಯ ಹಲವು ಪ್ರಕರಣಗಳು ವರದಿಯಾಗುತ್ತಿರುವ ನಡುವೆಯೇ ಭಾರಿ ಸಂಖ್ಯೆಯ ಭಾರತೀಯರು ಈ ಮಾರ್ಗ ಅನುಸರಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. 96917 ಮಂದಿ ಭಾರತೀಯರ ಪೈಕಿ 30100 ಮಂದಿಯನ್ನು ಕೆನಡಾ ಗಡಿಯಲ್ಲಿ ಮತ್ತು 41770 ಮಂದಿಯನ್ನು ಮೆಕ್ಸಿಕೊ ಗಡಿಯಲ್ಲಿ ಪತ್ತೆ ಮಾಡಲಾಗಿದೆ ಎಂದು ಯುಸಿಬಿಪಿ ಸ್ಪಷ್ಟಪಡಿಸಿದೆ.

ಉಳಿದವರನ್ನು ಅಮೆರಿಕಕ್ಕೆ ನುಸುಳಿದ ಬಳಿಕ ಪತ್ತೆ ಮಾಡಲಾಗಿದೆ. 2019-20ರಲ್ಲಿ ಅಕ್ರಮವಾಗಿ ನುಸುಳಲು ಯತ್ನಿಸಿದ 19883 ಮಂದಿ ಭಾರತೀಯ ರನ್ನು ಬಂಧಿಸಲಾಗಿದ್ದರೆ, ಕಳೆದ ವರ್ಷ ಈ ಪ್ರಮಾಣ ಐದು ಪಟ್ಟು ಹೆಚ್ಚಿದೆ.

ಈ ಅಂಕಿ ಅಂಶಗಳು ಕೇವಲ ದಾಖಲಾದ ಪ್ರಕರಣಗಳನ್ನಷ್ಟೇ ಬಿಂಬಿಸುತ್ತವೆ. ವಾಸ್ತವ ಸಂಖ್ಯೆ ಇನ್ನಷ್ಟು ಅಧಿಕ ಎಂದು ಕಾನೂನು ಜಾರಿಅಧಿಕಾರಿಗಳು ಹೇಳುತ್ತಾರೆ. “ಇದು ಇಡೀ ವ್ಯವಸ್ಥೆಯ ಒಂದು ತುಣುಕು. ಗಡಿಯಲ್ಲಿ ಒಬ್ಬನನ್ನು ಸೆರೆ ಹಿಡಿಯುವ ಅವಧಿಯಲ್ಲಿ ಕನಿಷ್ಠ 10 ಮಂದಿ ಯಶಸ್ವಿಯಾಗಿ ಅಮೆರಿಕಕ್ಕೆ ನುಸುಳಿರುತ್ತಾರೆ” ಎಂದು ಗುಜರಾತ್‍ನ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಮುಖ್ಯವಾಗಿ ಗುಜರಾತ್ ಹಾಗೂ ಪಂಜಾಬ್‍ನ ಜನತೆ ಅಮೆರಿಕದಲ್ಲಿ ನೆಲೆಸಲು ಬಯಸುತ್ತಾರೆ ಎಂದು ಅಕ್ರಮ ನುಸುಳುವಿಕೆ ದಂಧೆ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬಾರಿ 84 ಸಾವಿರ ವಯಸ್ಕರನ್ನು ಅಮೆರಿಕ ಗಡಿಯಲ್ಲಿ ಸೆರೆ ಹಿಡಿಯಲಾಗಿದೆ. 730 ಮಂದಿ ಪೋಷಕರಿಲ್ಲದ ಮಕ್ಕಳು ಕೂಡಾ ಸೆರೆ ಸಿಕ್ಕಿದ್ದಾರೆ ಎಂದು ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!