ಪಾದೂರು ಯೋಜನಾ ಸಂತ್ರಸ್ತರಿಗೆ ಸೂಕ್ತ ಜಾಗ ನೀಡಲು ಮಾಜಿ ಸಚಿವ ಸೊರಕೆ ಆಗ್ರಹ
ಕಾಪು, ನ.2: ಪಾದೂರು ಐ.ಎಸ್.ಪಿ.ಆರ್.ಎಲ್ 2ನೇ ಹಂತದ ಕ್ರೂಡ್ ಆಯಿಲ್ ಶೇಖರಣ ಘಟಕವು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಯಾಗಿದೆ. ಈ ಯೋಜನೆಯಿಂದ ಸಂತ್ರಸ್ತರಾಗಿ ಭೂಮಿಕಳೆದುಕೊಳ್ಳು ವಂತಹ ಸಂತ್ರಸ್ಥರಿಗೆ ಅನುಕೂಲವಾದ ಸ್ಥಳವನ್ನು ನೀಡುವ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಆಗ್ರಹಿಸಿದ್ದಾರೆ.
ಕೆಲವರು ಭೂ ವ್ಯಾಪಾರದ ದೃಷ್ಟಿಯಿಂದ ಭೂಮಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಅನುಕೂಲವಾದ ಸ್ಥಳವನ್ನು ತೋರಿಸದೆ ಜಿಲ್ಲಾಡಳಿತವನ್ನು ದಾರಿ ತಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ. ಇದೊಂದು ಗಂಭೀರ ವಿಷಯವಾಗಿ ಪರಿಗಣಿಸ ಬೇಕಾಗಿದೆ. ನಿಜವಾದ ಸಂತ್ರಸ್ಥರನ್ನು ಹೊರಗಡೆ ಇಟ್ಟು ಅವರ ಅಭಿಪ್ರಾಯ ಕೇಳದೆ ಯಾರೋ ಸಂತ್ರಸ್ಥರೆಂದು ಬಿಂಬಿಸಿ ಅಕ್ರಮ ಮಾಡುವುದು ಎಷ್ಟು ಸೂಕ್ತ. ಗ್ರಾಪಂ ವ್ಯಾಪ್ತಿಯಲ್ಲಿಯೇ ಸಂತ್ರಸ್ಥರಿಗೆ ಸೂಕ್ತವಾದ ನಿವೇಶನವನ್ನು ಗುರುತಿಸಿ, ಪುನರ್ ವಸತಿಯನ್ನು ಕಲ್ಪಿಸಬೇಕು. ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳ ಬೇಕೆಂದು ಅವರು ತಿಳಿಸಿದರು.
ಇನ್ನೊಂದು ಮಹತ್ವದ ಯೋಜನೆಯಾದ ಸುಜ್ಞಾನ್ ಕಂಪೆನಿಯು ನಂದಿಕೂರಿನಲ್ಲಿ ಎಸ್.ಇ.ಝಡ್ ಮುಖಾಂತರ ಸಾವಿ ರಾರು ಎಕ್ರೆ ಭೂಮಿಯನ್ನು ಪಡೆದಿದೆ. ಕಂಪೆನಿಯು ಈಗ ದುಸ್ಥಿತಿಯಲ್ಲಿದ್ದು, ರಿಯಲ್ ಎಸ್ಟೇಟ್‌ನವರೊಂದಿಗೆ ಸೇರಿ ಜಾಗ ಮಾರಾಟ ಮಾಡುತ್ತಿರುವುದು ದುರದೃಷ್ಟಕರ. ಗ್ರಾಮದ ಆಸು ಪಾಸಿನಲ್ಲಿ ವಸತಿ, ಮನೆ ಸ್ಥಳವಿಲ್ಲದೆ ಸಾವಿರಾರು ಕುಟುಂಬ ಇದ್ದು, ಅವರ ಬಗ್ಗೆ ಯೋಚನೆ ಮಾಡದೆ ಈ ಕಂಪೆನಿಯು ಜಾಗವನ್ನು ವಶಪಡಿಸಿ ಕೊಂಡು ಜಾಗ ಮಾರಾಟದ ಕೇಂದ್ರವಾಗಿರುವುದು ದುರಂತ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.