ಅಖಿಲ ಭಾರತ ಕೊಂಕಣಿ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಹೇಮಾ ನಾಯ್ಕ್
ಮಂಗಳೂರು: ನ.4 ಮತ್ತು 5 ರಂದು ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ ಇಲ್ಲಿ 25ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲಿ, ಎರಡೂ ದಿನ ಪರಿಸಂವಾದ, ಸಾಹಿತ್ಯ ಸಾದರೀಕರಣ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಹಬ್ಬ ನಡೆಯಲಿದೆ. ಖ್ಯಾತ ಹಿಂದಿ ಕವಿ, ವಿಮರ್ಷಕ ವಿದ್ವಾಂಸ ಉದಯನ್ ವಾಜಪೇಯಿ ಇವರು ನ. 4 ರಂದು ಪೂರ್ವಾಹ್ನ 10 ಕ್ಕೆ ಸಮ್ಮೇಳನ ಉದ್ಘಾಟಿಸಿ ‘ಸಾಹಿತ್ಯ ಮತ್ತು ಬದುಕು’ ಈ ಕುರಿತು ಶಿಖರೋಪನ್ಯಾಸ ನೀಡಲಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಮೈಕಲ್ ಡಿ ಸೊಜಾ ಅವರು, ಸಮ್ಮೇಳನದ ಸರ್ವಾಧ್ಯಕ್ಷೆ ಖ್ಯಾತ ಕಾದಂಬರಿಕಾರ್ತಿ ಮತ್ತು ಕೊಂಕಣಿ ಚಳುವಳಿಯ ಮುಂದಾಳು ಹೇಮಾ ನಾಯ್ಕ್ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ. ನ. 5 ರ ಸಂಜೆ 3.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಖ್ಯಾತ ಕನ್ನಡ ಸಾಹಿತಿ, ಪ್ರಾಧ್ಯಾಪಕಿ ಮಮತಾ ಜಿ. ಸಾಗರ ‘ಸಾಹಿತ್ಯ ಮತ್ತು ಸಾಮಾಜಿಕ ಜವಾಬ್ದಾರಿ’ ಈ ಕುರಿತು ಉಪನ್ಯಾಸ ನೀಡಲಿದ್ದಾರೆ.
ಪ್ರಮುಖ ಉಪನ್ಯಾಸಗಳು ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಇದ್ದು, ಕೊಂಕಣಿಯೇತರ ಸಾಹಿತ್ಯಾಸಕ್ತರೂ ಸಮ್ಮೇಳನದಲ್ಲಿ ಭಾಗವಹಿಸ ಬಹುದಾಗಿದೆ. ನ.4 ರಂದು ಸಂಜೆ 5.30 ಕ್ಕೆ ಖ್ಯಾತ ವಿದ್ವಾಂಸ ಡಾ| ಪುರುಷೋತ್ತಮ ಬಿಳಿಮಳೆಯವರ ಅಧ್ಯಕ್ಷತೆಯಲ್ಲಿ ಸಮಕಾಲೀನ ಬರಹಗಾರಿಗೆ ಸವಾಲುಗಳು ಈ ವಿಷಯದ ಮೇಲೆ ಇಂಗ್ಲಿಷ್ ಭಾಷೆಯಲ್ಲಿ ಪರಿಸಂವಾದ ನಡೆಯಲಿದ್ದು, ಉದಯನ್ ವಾಜಪೇಯಿ ಮತ್ತು ಮಮತಾ ಜಿ. ಸಾಗರ ವಿಚಾರ ಮಂಡನೆ ಮಾಡಲಿದ್ದಾರೆ.
ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಂದ ಹಾಗೂ ಗೋವಾ, ಕೇರಳ, ಮಹಾರಾಷ್ಟ್ರ, ದೆಹಲಿಯಿಂದಲೂ ಸುಮಾರು 600 ಮಂದಿ ಈ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಕೊಂಕಣಿ ಭಾಷೆ ಮತ್ತು ಸಾಹಿತ್ಯದ ವೈವಿಧ್ಯತೆ ಮತ್ತು ಸೊಗಡನ್ನು ಸವಿಯಲು 25 ನೇ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನ ಕರಾವಳಿಯ ಸಾಹಿತ್ಯಾಸಕ್ತರಿಗೆ ಅವಕಾಶ ಕಲ್ಪಿಸಿದೆ. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದ್ದು, ಪ್ರತಿನಿಧಿಗಳಾಗಿ ನೋಂದಣಿ ಮಾಡಿಕೊಳ್ಳುವವರಿಗೆ ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ.
ವಿದ್ಯಾರ್ಥಿ ಜೀವನದಲ್ಲೇ ಬರವಣಿಗೆ ಮತ್ತು ಕೊಂಕಣಿ ಚಳುವಳಿಗೆ ದುಮುಕಿದ ಹೇಮಾ ನಾಯ್ಕ್ ಕೊಂಕಣಿ, ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾರೆ. ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತç ಪದವಿ ಪಡೆದಿದ್ದಾರೆ. ಕತೆ, ಕಾದಂಬರಿ, ರೇಡಿಯೊ ನಾಟಕಗಳನ್ನು ರಚಿಸಿರುವ ಅವರು ಸಂಪಾದಕಿ ಮತ್ತು ಪ್ರಕಾಶಕಿಯಾಗಿಯೂ ಸೇವೆ ನೀಡಿದ್ದಾರೆ. ಈ ವರೆಗೆ 8 ಸ್ವತಂತ್ರ ಪುಸ್ತಕಗಳನ್ನು ಪ್ರಕಟಿಸಿರುವ ಹೇಮಾ ನಾಯ್ಕ್, 10 ಕ್ಕೂ ಜಾಸ್ತಿ ಕೃತಿಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ಮಹಿಳಾ ಪರ ಸಂಘಟನೆ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಹೇಮಾ ನಾಯ್ಕ್, ದೂರದರ್ಶನ ವಾಹಿನಿಗಾಗಿ ಕೊಂಕಣಿ ಸಿನೆಮಾ ನಿರ್ಮಾಣ ಮಾಡಿದ್ದಾರೆ. ಅವರ ಸಾಹಿತ್ಯ ಸೇವೆಗಾಗಿ ಹೊಸ ದೆಹಲಿಯ ಸಾಹಿತ್ಯ ಅಕಾಡೆಮಿ, ಗೋವಾ ಸರಕಾರದ ಕಲಾ ಅಕಾಡೆಮಿ, ಭಾಷಾ ಮಂಡಳ್ ಗೋವಾ, ಕಥಾ, ಮಣಿಪಾಲದ ಡಾ| ಟಿ. ಎಂ. ಪೈ. ಪೌಂಡೇಶನ್ ಹೀಗೆ ಹತ್ತಾರು ಪ್ರಶಸ್ತಿ – ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಗೆ ಹೇಮಾ ನಾಯ್ಕ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷ ನಂದಗೋಪಾಲ ಶೆಣೈ, ಅಖಿಲ ಭಾರತೀಯ ಕೊಂಕಣಿ ಪರಿಷದ್ ಉಪಾಧ್ಯಕ್ಷ ಮೆಲ್ವಿನ್ ರೊಡ್ರಿಗಸ್,ಅಖಿಲ ಭಾರತೀಯ ಕೊಂಕಣಿ ಪರಿಷದ್ ಕಾರ್ಯಾಧ್ಯಕ್ಷ ಚೇತನ್ ಆಚಾರ್ಯ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ಟೈಟಸ್ ನೊರೊನ್ಹಾ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಚ್. ಎಮ್. ಪೆರ್ನಾಲ್ ಉಪಸ್ಥಿತರಿದ್ದರು.