ಅಖಿಲ ಕರ್ನಾಟಕ ಕಣ್ಣಿನ ತಜ್ಞರ ಸಂಘದ ಅಧ್ಯಕ್ಷರಾಗಿ ಡಾ.ಕೃಷ್ಣ ಪ್ರಸಾದ್ ಕೂಡ್ಲು ಅಧಿಕಾರ ಸ್ವೀಕಾರ

ಉಡುಪಿ, ನ.2: ಬೆಂಗಳೂರಿನ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ರವಿವಾರ ನಡೆದ 42ನೇ ಅಖಿಲ ಕರ್ನಾಟಕ ಕಣ್ಣಿನ ತಜ್ಞರ ಸಮ್ಮೇಳನದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನೇತ್ರ ತಜ್ಞ ಡಾ ಕೃಷ್ಣಪ್ರಸಾದ್ ಕೂಡ್ಲು ಅವರು ಅಖಿಲ ಕರ್ನಾಟಕ ಕಣ್ಣಿನ ತಜ್ಞರ ಸಂಘದ ಅಧ್ಯಕ್ಷರಾಗಿ ರವಿವಾರ ಅಧಿಕಾರ ಸ್ವೀಕರಿಸಿದರು.

ಕಣ್ಣಿನ ತಜ್ಞರಾದ ಡಾ ಹೇಮಂತ್ ಮೂರ್ತಿಯವರು ಡಾ.ಕೃಷ್ಣಪ್ರಸಾದ್ ಅವರಿಗೆ ಅಧಿಕಾರ ಹಸ್ತಾಂತರಿಸಿ, ಡಾ. ಕೃಷ್ಣಪ್ರಸಾದ್ ಅವರು ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳನ್ನು ಮಾಡುತ್ತಾ, ಜನಸಾಮಾನ್ಯರಿಗೆ ಅನುಕೂಲವಾಗುವ ಕಣ್ಣಿನ ಉಚಿತ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ.

ಅವರು ಈಗಾಗಲೇ ಅಖಿಲ ಕರ್ನಾಟಕ ಕಣ್ಣಿನ ತಜ್ಞರ ವೈಜ್ಞಾನಿಕ ಸಮಿತಿ ಸಮಿತಿ ಅಧ್ಯಕ್ಷರಾಗಿ 2 ವರ್ಷಗಳ ಕಾಲ ಹಾಗೂ ಕಾರ್ಯದರ್ಶಿಯಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅಖಿಲ ಭಾರತ ಕಣ್ಣಿನ ತಜ್ಞರ ಸಂಘದ ಪ್ರಸ್ತುತ ಎಡಿಟರ್ ಪ್ರೊಸೀಡಿಂಗ್ ಆಗಿ ಹಾಗೂ ಕರ್ನಾಟಕ ರಾಜ್ಯ ಸರಕಾರದ ಯಶಸ್ವಿನಿ ಆರೋಗ್ಯ ಟ್ರಸ್ಟ್‌ನ ಟ್ರಸ್ಟಿಯಾಗಿ ಕಾರ್ಯನಿರ್ವಹಿಸು ತ್ತಿದ್ದಾರೆ ಎಂದು ಶುಭ ಹಾರೈಸಿದರು.

ಅಧಿಕಾರ ಸ್ವೀಕರಿಸಿದ ಡಾ ಕೃಷ್ಣಪ್ರಸಾದ್ ಮಾತನಾಡಿ, ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿರುವ ಕಣ್ಣಿನ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಹಾಗೂ ಸರಕಾರದ ಎಲ್ಲ ಯೋಜನೆಗಳಲ್ಲಿ ಕಣ್ಣಿನ ತಜ್ಞರನ್ನು ತೊಡಗಿಸಿಕೊಳ್ಳುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇನೆ ಎಂದು ತಿಳಿಸಿದರು.

ಮುಖ್ಯ ಅತಿಥಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ಅಖಿಲ ಕರ್ನಾಟಕ ಕಣ್ಣಿನ ತಜ್ಞರ ಸಂಘದ ಸದಸ್ಯರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *

error: Content is protected !!