ಈಶ್ವರಪ್ಪ, ಕೋಟ, ಪಿಸಿ ಮೋಹನ್‌ಗೆ ಹೈಕಮಾಂಡ್ ದಿಢೀರ್ ಬುಲವ್!
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ರಾಜ್ಯ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಇನ್ನೂ ಆಗಿಲ್ಲ. ಇನ್ನು ನಾಲ್ಕೈದು ತಿಂಗಳಲ್ಲಿ ಕೇಂದ್ರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.
ರಾಜ್ಯ ಬಿಜೆಪಿ ನಾಯಕರನ್ನು ದೆಹಲಿ ನಾಯಕರು ಕಡೆಗಣಿಸುತ್ತಿದ್ದಾರೆ ಎಂಬ ಆರೋಪಗಳು ಈಗ ಹೊಸದಾಗಿ ಕೇಳಿಬರುತ್ತಿದ್ದು, ಇವುಗಳ ಮಧ್ಯೆ ನಡೆದ ಮತ್ತೊಂದು ಬೆಳವಣಿಗೆಯಲ್ಲಿ ಮೂವರು ನಾಯಕರನ್ನು ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.
ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಎಂಎಲ್‌ಸಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಪಿಸಿ ಮೋಹನ್‌ಗೆ ಬಿಜೆಪಿ ಹೈಕಮಾಂಡ್‌ನಿಂದ ಬುಲಾವ್ ಬಂದಿದೆ. ಇದರಂತೆ ಈ ಮೂವರು ನಾಯಕರು ಇಂದು ದೆಹಲಿಗೆ ತೆರಳಲಿದ್ದಾರೆ. ಇಂದು ಅಪರಾಹ್ನ 3.30ಕ್ಕೆ ಬಿಜೆಪಿ ಕಚೇರಿಯಲ್ಲಿ ಭೇಟಿಯಾಗಲು ಮೂವರೂ ನಾಯಕರಿಗೆ ಸೂಚನೆ ನೀಡಲಾಗಿದೆ. ಕಳೆದ ವಾರ ಮಾಜಿ ಸಿಎಂ ಡಿವಿ ಸದಾನಂದ ಗೌಡರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ಹೈಕಮಾಂಡ್, ಕೊನೆಯ ಕ್ಷಣದಲ್ಲಿ ಭೇಟಿ ಮಾಡದೆ ವಾಪಸ್ ಕಳುಹಿಸಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗುವುದಕ್ಕಾಗಿ ಸದಾನಂದ ಗೌಡರು ದೆಹಲಿಗೆ ತೆರಳಿದ್ದರು.
ಈ ನಡುವೆ, ಹೈಕಮಾಂಡ್‌ನಿಂದ ಕರೆ ಬಂದಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ನನ್ನ ಜೊತೆಗೆ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಪಿ.ಸಿ. ಮೋಹನ್ ಅವರಿಗೂ ಬರಲು ಹೇಳಿದ್ದಾರೆ. ಯಾಕೆ ಕರೆದಿದ್ದಾರೆ ಗೊತ್ತಿಲ್ಲ. ಅಲ್ಲಿಗೆ ಹೋದ ಮೇಲೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನೇಮಕಾತಿ ಬಗ್ಗೆ ಸದಾನಂದ ಗೌಡ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಗೌಡರು ಹೇಳಿದ್ದು ಅಲ್ಲಿಗೆ ಮುಗಿದಿದೆ. ಸಮಸ್ಯೆ ಅಲ್ಲಿಗೆ ಪರಿಹಾರ ಆಗಿದೆ. ಅವರು ಅದನ್ನು ಮುಂದುವರಿಸಿಲ್ಲ. ಮುಂದುವರಿಸಿರುತ್ತಿದ್ದರೆ ಏನು ಮಾಡಬೇಕು ಅಂತಾ ಹೇಳುತ್ತಿದ್ದೆ ಎಂದರು.