ಬ್ರಹ್ಮಾವರ: ಬಟ್ಟೆ ಅಂಗಡಿ ಹಾಕಿಸಿ ಕೊಡುವುದಾಗಿ ವಂಚನೆ ಪ್ರಕರಣ- ಚೈತ್ರಾ ವಿಚಾರಣೆ
ಬ್ರಹ್ಮಾವರ, ಅ.31: ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ನಂಬಿಸಿ 5 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಡಿ ವಾರೆಂಟ್ ಮೂಲಕ ಕುಂದಾಪುರ ಮೂಲದ ಚೈತ್ರಾಳನ್ನು ವಿಚಾರಣೆಗಾಗಿ ಪೊಲೀಸರು ಮಂಗಳವಾರ ಬ್ರಹ್ಮಾವರ ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆ ನಡೆಸಿದ್ದಾರೆ.
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿದ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಚೈತ್ರಾಳನ್ನು ಪೊಲೀಸ್ ಕಸ್ಟಡಿಗೆ ಪಡೆದ ಕೋಟ ಪೊಲೀಸರು ಮಂಗಳವಾರ ಬೆಂಗಳೂರಿನಿಂದ ಕೋಟಕ್ಕೆ ಕರೆ ತಂದಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಚೈತ್ರಾಳನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಆದರೆ ನ್ಯಾಯಾಲಯವು ಆಕೆಯನ್ನು ಒಂದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿತು.
ಬಳಿಕ ಬ್ರಹ್ಮಾವರ ಸಿಪಿಐ ದಿವಾಕರ್ ಪಿಎಂ ನೇತೃತ್ವದಲ್ಲಿ ಕೋಟ ಪಿಎಸ್‌ಐ ಶಂಭುಲಿಂಗಯ್ಯ ತಂಡ ಆಕೆಯನ್ನು ವಿಚಾರಣೆ ನಡೆಸಿ, ಹೇಳಿಕೆಯನ್ನು ಪಡೆದುಕೊಂಡಿತು. ಕೋಟ ಠಾಣೆಯಲ್ಲಿ ಈ ಹಿಂದೆ ಸುಧೀನ ಎಂಬವರು ನೀಡಿದ ದೂರಿನ ಕುರಿತಂತೆ ವಿಚಾರಣೆ ನಡೆಸಲಾಯಿತು.
ವಿಚಾರಣೆ ಪೂರ್ಣಗೊಂಡ ಬಳಿಕ ಚೈತ್ರಾಳನ್ನು ಬ್ರಹ್ಮಾವರ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿ ನ್ಯಾಯಾಲಯ ಸಂಚಾರಿಪೀಠ ಎದುರು ಪೊಲೀಸರು ಹಾಜರುಪಡಿಸಿದರು. ನ್ಯಾಯಾಲಯದ ಕಾನೂನು ಪ್ರಕ್ರಿಯೆಗಳನ್ನು ಮುಗಿದ ಬಳಿಕ ಪೊಲೀಸರು, ಚೈತ್ರಾಳನ್ನು ಮಂಗಳೂರಿನ ಜೈಲಿಗೆ ಕರೆದುಕೊಂಡು ಹೋದರು. ಅಲ್ಲಿಂದ ನಾಳೆ ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ಆಕೆಯನ್ನು ಕಳುಹಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಕೋಟ ಠಾಣಾ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತ ಸುಧೀನ ಎಂಬವರಿಗೆ 2015ರಲ್ಲಿ ಪರಿಚವಾದ ಚೈತ್ರಾ ತನಗೆ ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸಚಿವರು, ಮಂತ್ರಿಗಳ, ಶಾಸಕರ ನಿಕಟ ಸಂಪರ್ಕವಿದೆ ಎಂದು ನಂಬಿಸಿ 2018 ರಿಂದ 2023ರ ತನಕ ಬಟ್ಟೆ ಅಂಗಡಿ ನಿರ್ಮಾಣಕ್ಕೆ ಐದು ಲಕ್ಷ ಹಣವನ್ನು ಹಂತ ಹಂತವಾಗಿ ಪಡೆದಿದ್ದಳು. ಮೂರು ಲಕ್ಷವನ್ನು ಚೈತ್ರಾ ಖಾತೆಗೆ ವರ್ಗಾಯಿಸಿದ್ದ ಸುದೀನ, ಉಳಿದ ಎರಡು ಲಕ್ಷ ಹಣವನ್ನ ನಗದು ರೂಪದಲ್ಲಿ ನೀಡಿದ್ದರು. ಅದರಂತೆ ಚೈತ್ರಾ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ 506, 417, 420 ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿತ್ತು.