ಬೆಳ್ಳಂಬೆಳಗ್ಗೆ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಸಿಬಿಐ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದು, ಮನೆಯ ಮೇಲೆ ರೇಡ್ ಮಾಡಿದ್ದಾರೆ.
ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಇಂದು ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಡಿಕೆಶಿ ಮನೆಯ ಮೇಲೆ ದಾಳಿ ಮಾಡುವಂತೆ ರಾಜ್ಯ ಸರ್ಕಾರ ಸಿಬಿಐ ಅಧಿಕಾರಿಗಳಿಗೆ ಅನುಮತಿ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ರಾಜ್ಯ ಸರ್ಕಾರದ ಅನುಮತಿ ಮೇರೆಗೆ ಇಂದು ಬೆಳಗ್ಗೆ 8.10 ಗಂಟೆಗೆ ಸಿಬಿಐ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿದ್ದು, ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಡಿಕೆಶಿಗೆ ಸೇರಿದ ಹಲವು ಕಡೆಗಳಲ್ಲಿ ಕೂಡ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ದೆಹಲಿಯ 4 ಕಡೆ, ಮುಂಬೈಯ 1 ಕಡೆ ದಾಳಿ: ಸಿಬಿಐ ಅಧಿಕಾರಿಗಳು ದೆಹಲಿ, ಮುಂಬೈ ಕೂಡ ಬಿಟ್ಟಿಲ್ಲ. ದೆಹಲಿಯಲ್ಲಿ ಸಂಸದ ಡಿ ಕೆ ಸುರೇಶ್ ವಾಸ್ತವ್ಯ ಹೂಡುವ ಕಾವೇರಿ ಅಪಾರ್ಟ್ ಮೆಂಟ್ ಮೇಲೆ, ಮುಂಬೈಯಲ್ಲಿರುವ ನಿವಾಸಗಳ ಮೇಲೆ ಸಹ ವ್ಯವಸ್ಥಿತವಾಗಿ ದಾಳಿ ನಡೆಸಿದ್ದಾರೆ. ಸಾಕಷ್ಟು ಪೂರ್ವ ತಯಾರಿ ನಡೆಸಿಯೇ ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆಯೇ ಸರ್ಚ್ ವಾರಂಟ್ ಬಂದಿತ್ತು ಎಂದು ತಿಳಿದುಬಂದಿದೆ.
ಕಳೆದ ವರ್ಷ ಸೆಪ್ಟೆಂಬರ್ 3ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿ ಡಿಕೆಶಿ ಜೈಲು ಸೇರಿದ್ದರು. ಇದೀಗ ಒಂದು ವರ್ಷ ಕಳೆಯುವ ಬೆನ್ನಲ್ಲೇ ಮತ್ತೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಮನೆಯ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದು, ಅವರ ಮನೆಯಲ್ಲೂ ಶೋಧಕಾರ್ಯ ನಡೆಸುತ್ತಿದ್ದಾರೆ.