ಪುತ್ರನ ಆಸ್ತಿಯಲ್ಲಿ ತಾಯಿಗೂ ಹಕ್ಕು: ಹೈಕೋರ್ಟ್‌ನಿಂದ ಮಹತ್ವದ ಆದೇಶ

ಬೆಂಗಳೂರು, ಅ.26: ಹಿಂದೂ ಉತ್ತರಾಧಿಕಾರಿ ಕಾಯಿದೆಯಡಿ ಮೃತ ಪುತ್ರನ ಆಸ್ತಿಗೆ ತಾಯಿಯು ಮೊದಲನೇ ವರ್ಗದ ವಾರಸುದಾರಳಾಗಿದ್ದು(ಕ್ಲಾಸ್ 1 ಹೇರ್ಸ್), ಪತಿ ಜೀವಂತವಾಗಿದ್ದರೂ ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರನಿಗೆ ಸೇರಬೇಕಿರುವ ಆಸ್ತಿಯಲ್ಲಿ ತಾಯಿ ತನ್ನ ಪಾಲು ಪಡೆಯಬಹುದು ಎಂದು ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ.

ಮೃತಪಟ್ಟಿರುವ ಪುತ್ರ ಸಂತೋಷ್ ಪಾಲಿನ ಆಸ್ತಿಯಲ್ಲಿ ಪಾಲು ಪಡೆಯಲು ತಾಯಿ ಹಕ್ಕು ಹೊಂದಿಲ್ಲ ಎಂದು ಆದೇಶಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಟಿ.ಎನ್.ಸುಶೀಲಮ್ಮ ಎಂಬವರು ಸಲ್ಲಿಸಿದ್ದ ಸಾಮಾನ್ಯ ಎರಡನೇ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ. ವಿಪರ್ಯಾಸ ವೆಂದರೆ, ಅರ್ಜಿ ವಿಚಾರಣೆ ಹಂತದಲ್ಲಿರುವಾಗಲೇ ಸುಶೀಲಮ್ಮ ಅವರೂ ವಿಧಿವಶರಾಗಿದ್ದರು.

ಅರ್ಜಿಯಲ್ಲಿ ಒಮ್ಮೆ ಸುಶೀಲಮ್ಮ ಅವರನ್ನು ಪಕ್ಷಕಾರರನ್ನಾಗಿ ಮಾಡಿದ ಮೇಲೆ ಅವರೂ ಸಂತೋಷ್ ಅವರ ಮೊದಲನೆ ವರ್ಗದ ವಾರಸುದಾರರಾಗಲಿದ್ದಾರೆ. ಸಂತೋಷ್ ಅವರು ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದು, ಹಿಂದೂ ಅವಿಭಾಜ್ಯ ಕುಟುಂಬದಲ್ಲಿ ಸುಶೀಲಮ್ಮ ಮೊದಲನೇ ವರ್ಗದ ವಾರಸುದಾರರಾಗಲಿದ್ದಾರೆ. ಹೀಗಾಗಿ, ಸಂತೋಷ್ ಅವರ ಆಸ್ತಿಯಲ್ಲಿ ಪಾಲು ಪಡೆಯಲು ಮೂಲ ಮೇಲ್ಮನವಿದಾರರಾದ ಸುಶೀಲಮ್ಮ ಅರ್ಹರಾಗಲಿದ್ದು, ಮೊದಲ ಮೇಲ್ಮನವಿ ನ್ಯಾಯಾಲಯದ ನಡೆ ದೋಷಪೂರಿತವಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಸುಶೀಲಮ್ಮ ಅವರ ಪತಿ ಜೀವಂತವಾಗಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಸಂತೋಷ್ ನಿಧನರಾದ ಬಳಿಕ ಸುಶೀಲಮ್ಮ ಅವರು ಸಂತೋಷ್ ಅವರ ಮೊದಲ ವರ್ಗದ ವಾರಸುದಾರರಾಗುತ್ತಾರೆ. ಇದನ್ನು ವಿಚಾರಣಾಧೀನ ನ್ಯಾಯಾಲಯ ಪರಿಗಣಿಸಿಲ್ಲ. ಅಲ್ಲದೇ, ಅಮ್ಮನನ್ನು ದಾಯಾದಿ ಎಂದು ಪರಿಗಣಿಸಲಾಗದು. ಹೀಗಾಗಿ, ಆಕೆ ಪಿತ್ರಾರ್ಜಿತ/ಜಂಟಿ ಆಸ್ತಿಯಲ್ಲಿ ಪಾಲು ಕೋರಲಾಗದು ಎಂದು ತಪ್ಪಾಗಿ ಆದೇಶಿಸಿದೆ ಎಂದು ಹೈಕೋರ್ಟ್ ಹೇಳಿದೆ.

ವಾಸ್ತವಿಕ ಅಂಶಗಳು ಮತ್ತು ಕಾನೂನಿನ ನಿಬಂಧನೆ ಗಳನ್ನು ಆಳವಾಗಿ ವಿಶ್ಲೇಷಿಸಿರುವ ಹೈಕೋರ್ಟ್, ಸುಶೀಲಮ್ಮ ಅವರು ಸಂತೋಷ್ ಅವರ ಮೊದಲನೇ ವರ್ಗದ ವಾರಸುದಾರರಾಗಿದ್ದು, ಅವರು ಆಸ್ತಿಯಲ್ಲಿ ಪಾಲು ಪಡೆಯಲು ಹಕ್ಕುದಾರರಾಗಿದ್ದಾರೆ. ಪ್ರಕರಣದ ವಿಚಾರಣೆಯ ಹಂತದಲ್ಲಿ ಸುಶೀಲಮ್ಮ ಅವರು ನಿಧನರಾಗಿದ್ದು, ಪತಿ, ಪುತ್ರಿ ಮತ್ತು ಈಗಾಗಲೇ ಸಾವನ್ನಪ್ಪಿರುವ ಪುತ್ರನನ್ನು ಅಗಲಿದ್ದಾರೆ. ಈ ಹಿನ್ನೆಲೆ ಯಲ್ಲಿ ಹಿಂದೂ ಮಹಿಳೆಯ ಉತ್ತರಾಧಿಕಾರ ನಿಯಮಗಳ ಬಗ್ಗೆ ಚರ್ಚಿಸುವ ಹಿಂದೂ ಉತ್ತರಾಧಿಕಾರ ಕಾಯಿದೆಯ ಅನ್ವಯಿಸಬೇಕಿದೆ ಎಂದಿದೆ.

ಅಂದರೆ ಹಿಂದೂ ಮಹಿಳೆಗೆ ಸಂಬಂಧಿಸಿದ ಸಾಮಾನ್ಯ ಉತ್ತರಾಧಿಕಾರ ನಿಯಮಗಳ ಪ್ರಕಾರ ಹಿಂದೂ ಮಹಿಳೆಯ ಆಸ್ತಿಯು ಪುತ್ರರು, ಪುತ್ರಿಯರು (ಹಿಂದೆ ಸಾವನ್ನಪ್ಪಿರುವ ಪುತ್ರ ಅಥವಾ ಪುತ್ರಿಯ ಮಕ್ಕಳು ಸೇರಿ) ಮತ್ತು ಪತಿಗೆ ವಿಭಾಗವಾಗುತ್ತದೆ. ಹೀಗಾಗಿ, ಸುಶೀಲಮ್ಮ ಅವರ ಆಸ್ತಿಯು ಪುತ್ರ, ಪುತ್ರಿ ಮತ್ತು ಪತಿಗೆ ವಿಭಾಗವಾಗುತ್ತದೆ ಎಂದಿರುವ ಹೈಕೋರ್ಟ್, ವಿಚಾರಣಾಧೀನ ನ್ಯಾಯಾಲಯದ ಆದೇಶದಲ್ಲಿ ಮಾರ್ಪಾಡು ಮಾಡಿ ಆಸ್ತಿ ಹಂಚಿಕೆ ಮಾಡಿದೆ.

ಪ್ರಕರಣದ ಮಾಹಿತಿ:- ಸಂತೋಷ್ ಪತ್ನಿ ಮತ್ತು ಪುತ್ರ ಪೂರ್ವಜರ ಆಸ್ತಿಯಲ್ಲಿ ಪಾಲು ಕೋರಿ ವಿಚಾರಣಾಧೀನ ನ್ಯಾಯಾಲಯ ಮತ್ತು ಪ್ರಥಮ ಮೇಲ್ಮನವಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಇತ್ಯರ್ಥಪಡಿಸುವಾಗ ಸಂತೋಷ್ ತಾಯಿಯಾದ ನನ್ನನ್ನು ಪಕ್ಷಕಾರಳನ್ನಾಗಿಸದಿರುವುದ ನ್ನು ವಿಚಾರಣಾಧೀನ ಮತ್ತು ಪ್ರಥಮ ಮೇಲ್ಮನವಿ ನ್ಯಾಯಾಲಯಗಳು ಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ, ಅವುಗಳ ಆದೇಶ ಅಕ್ರಮ, ಸ್ವೇಚ್ಛೆ ಮತ್ತು ಅನ್ಯಾಯದಿಂದ ಕೂಡಿವೆ. ಮೇಲ್ಮನವಿದಾರೆಯಾದ ತಾನು ಸಾವನ್ನಪ್ಪಿರುವ ಸಂತೋಷ್ ಅವರ ತಾಯಿಯಾಗಿದ್ದು, ಆತನ ಆಸ್ತಿಯಲ್ಲಿ ತನಗೂ ಪಾಲು ಬರಬೇಕಿದೆ ಎಂದು ಕೋರಿ ಸುಶೀಲಮ್ಮ ಅವರು ಹೈಕೋರ್ಟ್‍ಗೆ ಸಾಮಾನ್ಯ ಎರಡನೇ ಮೇಲ್ಮನವಿ ಸಲ್ಲಿಸಿದ್ದರು.

Leave a Reply

Your email address will not be published. Required fields are marked *

error: Content is protected !!