ಗಾರ್ಭಾ ನೃತ್ಯ ಕಾರ್ಯಕ್ರಮದ ವೇಳೆ ಹೃದಯಾಘಾತದಿಂದ 10 ಮಂದಿ ಸಾವು

ಗಾಂಧಿನಗರ: ಗುಜರಾತ್‌ನ ಕಪಡವಂಜ ಖೇಡಾ ಜಿಲ್ಲೆಯಲ್ಲಿ ನವರಾತ್ರಿ ಆಚರಣೆ ಸಂದರ್ಭ ಗಾರ್ಭಾ ನೃತ್ಯ ಮಾಡುತ್ತಿದ್ದ 17 ವರ್ಷದ ಬಾಲಕ ವೀರ್ ಶಾ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಇದರೊಂದಿಗೆ ಗುಜರಾತ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ನವರಾತ್ರಿ ಆಚರಣೆಯಲ್ಲಿ ಗಾರ್ಭ ನೃತ್ಯ ಮಾಡುತ್ತಿದ್ದ ಸಂದರ್ಭ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ನವರಾತ್ರಿಯ ಆಚರಣೆಯ 6ನೇ ದಿನವಾದ ಶುಕ್ರವಾರ ಗಾರ್ಭಾ ನೃತ್ಯ ಮಾಡುತ್ತಿದ್ದ ವೀರ್ ಶಾ ಹೃದಯಾಘಾತ ದಿಂದ ಮೃತಪಟ್ಟಿದ್ದಾನೆ. ಅಹ್ಮದಾಬಾದ್‌ನಲ್ಲಿ ಗಾರ್ಭಾ ನೃತ್ಯ ಮಾಡುತ್ತಿದ್ದ 28 ವರ್ಷದ ರವಿ ಪಂಚಾಲ್ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬರೋಡಾದ ದಾಭೋಲಿಯಲ್ಲಿ 13 ವರ್ಷದ ಬಾಲಕನೋರ್ವ ಹೃದಯಾಘಾತದಿಂದ ಸಾವನ್ನಪ್ಪುವುದರೊಂದಿಗೆ ಈ ಸರಣಿ ಸಾವುಗಳು ಆರಂಭವಾಗಿವೆ.

ನವರಾತ್ರಿಯ ಕಳೆದ 6 ದಿನಗಳಲ್ಲಿ ಹೃದಯ ಸಮಸ್ಯೆಗಳಿಗೆ ಸಂಬಂಧಿಸಿ 521 ಕರೆಗಳನ್ನು ಗುಜರಾತ್‌ನ 108 ತುರ್ತು ಆ್ಯಂಬುಲೆನ್ಸ್ ಸೇವೆ ಸ್ವೀಕರಿಸಿದೆ. ಅಲ್ಲದೆ, ಉಸಿರಾಟದ ಸಮಸ್ಯೆಗೆ ಸಂಬಂಧಿಸಿ 609 ಕರೆಗಳನ್ನು ಸ್ವೀಕರಿಸಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಇದರಲ್ಲಿ ಹೆಚ್ಚಿನ ಕರೆಗಳನ್ನು ಸಾಮಾನ್ಯವಾಗಿ ಗಾರ್ಭಾ ಆಚರಣೆ ನಡೆಯುವ ರಾತ್ರಿ 6 ಗಂಟೆಯಿಂದ 2 ಗಂಟೆಗಳ ನಡುವೆ ಸ್ವೀಕರಿಸಲಾಗಿದೆ ಎಂದು ಅದು ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!