2021ರ ಜುಲೈ ವೇಳೆಗೆ 25 ಕೋಟಿ ಜನರಿಗೆ ‘ಕೋವಿಡ್–19’ ಲಸಿಕೆ ಗುರಿ: ಹರ್ಷವರ್ಧನ್

ನವದೆಹಲಿ: ಕೋವಿಡ್–19 ಚಿಕಿತ್ಸೆಗಾಗಿ 2021ರ ಜುಲೈ ವೇಳೆಗೆ ಅಂದಾಜು 40ರಿಂದ 50 ಕೋಟಿ ಡೋಸ್‌ ಲಸಿಕೆ ಲಭ್ಯವಿರಲಿದ್ದು, ಇದನ್ನು 20ರಿಂದ 25 ಕೋಟಿ ಜನರಿಗೆ ನೀಡಬಹುದಾಗಿದೆ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿದೆ.

ಅಲ್ಲದೆ, ಕೋವಿಡ್–19 ಲಸಿಕೆಯನ್ನು ಆದ್ಯತೆಯ ಮೇರೆಗೆ ನೀಡಬೇಕಾಗಿರುವ ಜನರ ಪಟ್ಟಿಯನ್ನು ಅಕ್ಟೋಬರ್ ಅಂತ್ಯದೊಳಗೇ ಸಲ್ಲಿಸಬೇಕು ಎಂದೂ ರಾಜ್ಯಗಳಿಗೆ ಸೂಚನೆ ನೀಡಿದೆ.

‘ಕೋವಿಡ್‌–19 ನಿರ್ವಹಣೆಯಲ್ಲಿ ನಿರತರಾಗಿರುವ ಆರೋಗ್ಯ ಸೇವೆಯ ಕಾರ್ಯಕರ್ತರುಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತದೆ. ಲಸಿಕೆಯನ್ನು ಎಲ್ಲ ಆಯಾಮಗಳಿಂದಲೂ ಉನ್ನತ ಮಟ್ಟದ ಪರಿಣಿತರ ಸಮೂಹ ಪರಿಶೀಲಿಸಲಿದೆ. ರಾಜ್ಯಗಳು ನೀಡಬೇಕಾಗಿರುವ ಜನರ ಪಟ್ಟಿಯ ನಮೂನೆಯನ್ನು ಕೇಂದ್ರ ರೂಪಿಸುತ್ತಿದೆ’ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಭಾನುವಾರ ತಿಳಿಸಿದರು.

‘ಸಂಡೇ ಸಂವಾದ’ ಕಾರ್ಯಕ್ರಮದಡಿ ಸಾಮಾಜಿಕ ಜಾಲತಾಣಗಳ ಬೆಂಬಲಿಗರ ಜೊತೆಗೆ ನಡೆದ ಚರ್ಚೆಯಲ್ಲಿ ಅವರು ಈ ಮಾಹಿತಿ ನೀಡಿದರು.

‘ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವವರಲ್ಲಿ ಸರ್ಕಾರಿ ಹಾಗೂ ಖಾಸಗಿ ವಲಯದ ವೈದ್ಯರು, ನರ್ಸ್‌ಗಳು, ಅರೆವೈದ್ಯಕೀಯ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು, ಆಶಾ ಕಾರ್ಯಕರ್ತರು, ಕಣ್ಗಾವಲು ಅಧಿಕಾರಿಗಳು ಸೇರಿರುತ್ತಾರೆ’ ಎಂದು ತಿಳಿಸಿದರು.

‘ಪಟ್ಟಿ ತಯಾರಿಸುವ ಪ್ರಕ್ರಿಯೆ ಈ ತಿಂಗಳ ಅಂತ್ಯದೊಳಗೆ ಮುಗಿಯಲಿದೆ. ಅಲ್ಲದೆ, ಬ್ಲಾಕ್ ಮಟ್ಟದಲ್ಲಿ ಲಭ್ಯವಿರುವ ಮೂಲಸೌಲಭ್ಯಗಳ ಬಗ್ಗೆಯೂ ಮಾಹಿತಿ ಒದಗಿಸಬೇಕು ಎಂದು ರಾಜ್ಯಗಳಿಗೆ ತಿಳಿಸಲಾಗಿದೆ’ ಎಂದು ಹೇಳಿದರು.

ಲಸಿಕೆಯನ್ನು ನೀಡುವ ಮೊದಲು ರೋಗ ನಿರೋಧಕ ಶಕ್ತಿ ಕುರಿತ ಅಂಕಿ ಅಂಶಗಳನ್ನೂ ಕೇಂದ್ರವು ಗಮನಿಸಲಿದೆ. ಲಸಿಕೆಯು ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ ವಿತರಿಸಲು ಆಗುವಂತೆ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬರಿಗೂ ಲಸಿಕೆ ಸಿಗಬೇಕು ಎಂಬುದೇ ಸರ್ಕಾರದ ಪ್ರಥಮ ಆದ್ಯತೆ ಎಂದು ವಿವರಿಸಿದರು.

ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪೌಲ್ ಅವರ ನೇತೃತ್ವದಲ್ಲಿ ಇಡೀ ಪ್ರಕ್ರಿಯೆ ನಡೆಯುತ್ತಿದೆ. ಲಸಿಕೆ ಖರೀದಿಸುವ ಕಾರ್ಯ ಕೇಂದ್ರೀಕೃತವಾಗಿ ನಡೆಯುತ್ತಿದೆ. ಸಕಾಲದಲ್ಲಿ ನಿಗದಿತ ಗುರಿ ತಲುಪುವಂತೆ ಸಮಯ ಪರಿಪಾಲನೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

Leave a Reply

Your email address will not be published. Required fields are marked *

error: Content is protected !!