ವೈಮಾನಿಕ ದಾಳಿ ತೀವ್ರಗೊಳಿಸಿದ ಇಸ್ರೇಲ್- ಸಾವಿನ ಸಂಖ್ಯೆ 4,500ಕ್ಕೆ ಏರಿಕೆ!

ಟೆಲ್ ಅವೀವ್: ಹಮಾಸ್ ಉಗ್ರ ದಾಳಿ ಬಳಿಕ ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ವೈಮಾನಿಕ ದಾಳಿ ತೀವ್ರವಾಗಿದ್ದು, ಜನಸಮೂಹ ಮತ್ತು ಬೃಹತ್ ಕಟ್ಟಡಗಳಿಂದ ತುಂಬಿ ತುಳುಕುತ್ತಿದ್ದ ಗಾಜಾ ನಗರ ಇದೀಗ ಅಸ್ಥಿಪಂಜರದಂತಾಗಿದೆ.

ಇಸ್ರೇಲ್‌ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಕಾರಣ ಗಾಜಾ ನಗರದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಬಿಡಿ, ಅನ್ನ, ನೀರೂ ಕೂಡ ಸಿಗದಂತಾಗಿದೆ. ಇಸ್ರೇಲ್‌ ದಾಳಿಗೆ ಗಾಜಾ ನಗರವು ಬಹುತೇಕವಾಗಿ ನಾಶವಾಗುತ್ತಿದೆ. ಗಾಜಾ ನಗರದಲ್ಲಿ ಲಕ್ಷಾಂತರ ನಿರಾಶ್ರಿತರಾಗಿದ್ದಾರೆ. ಸಾವಿನ ಸಂಖ್ಯೆ ಈಗ 4,500ಕ್ಕೆ ಏರಿಕೆಯಾಗಿದೆ.

ಇದಲ್ಲದೆ ನಗರದಲ್ಲಿ ಶೇ.40ರಷ್ಟು ಮನೆಗಳು ಸಂಪೂರ್ಣವಾಗಿ ಹಾಳಾಗಿವೆ. ಗಾಯಗೊಂಡಿರುವ ಸಾವಿರಾರು ಜನರಿಗೆ ಚಿಕಿತ್ಸೆ ನೀಡಲು ಕೂಡ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಇಸ್ರೇಲ್‌ ಸತತ ದಾಳಿಗೆ ಹಮಾಸ್‌ ನಗರವು ಅಸ್ಥಿಪಂಜರದಂತಾಗಿದೆ. 

ಮಸೀದಿಗಳಲ್ಲಿ ಅಡಗಿ ಕುಳಿತ ಹಮಾಸ್ ಉಗ್ರರು!
ಇನ್ನು ಇಸ್ರೇಲ್‌ ರಾಕೆಟ್‌ ದಾಳಿಗೆ ವೆಸ್ಟ್‌ ಬ್ಯಾಂಕ್‌ ನಲ್ಲಿರುವ ಮಸೀದಿಯು ಸಂಪೂರ್ಣವಾಗಿ ಧ್ವಂಸಗೊಂಡಿದೆ. ಇಸ್ರೇಲ್‌ ಮೇಲೆ ಮತ್ತೆ ದಾಳಿ ನಡೆಸಲು ಹಮಾಸ್‌ ಉಗ್ರರು ಸಂಚು ರೂಪಿಸುತ್ತಿದ್ದಾರೆ. ಅವರು ವೆಸ್ಟ್‌ ಬ್ಯಾಂಕ್‌ನ ಜೆನಿನ್‌ ಎಂಬಲ್ಲಿರುವ ಮಸೀದಿ ಸೇರಿ ಹಲವೆಡೆ ಕುಳಿತು ಪಿತೂರಿ ನಡೆಸುತ್ತಿದ್ದಾರೆ. ಹಾಗಾಗಿ ಮಸೀದಿಯನ್ನು ಧ್ವಂಸಗೊಳಿಸುವ ಜತೆಗೆ ಹಮಾಸ್‌ ಉಗ್ರರನ್ನು ಹತ್ಯೆಗೈಯಲಾಗಿದೆ” ಎಂದು ಇಸ್ರೇಲ್‌ ಸೇನೆ ಮಾಹಿತಿ ನೀಡಿದೆ. ಮಸೀದಿ ಧ್ವಂಸಗೊಂಡಿರುವ ಜತೆಗೆ ಹತ್ತಾರು ಉಗ್ರರು ಇಸ್ರೇಲ್‌ ದಾಳಿಗೆ ಹತರಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಭಾರತದಿಂದಲೂ ಪ್ಯಾಲೆಸ್ತೀನ್‌ಗೆ ನೆರವು

ಸಮರಪೀಡಿತ ಪ್ಯಾಲೆಸ್ತೀನ್‌ಗೆ ಭಾರತ ಕೂಡ ಅಗತ್ಯ ವಸ್ತುಗಳ ನೆರವು ನೀಡಿದೆ. ಭಾರತೀಯ ವಾಯುಪಡೆಯ ಸಿ-17 ವಿಮಾನದಲ್ಲಿ ಈಜಿಪ್ಟ್ ನ ಎಲ್‌-ಐರಿಶ್‌ ವಿಮಾನ ನಿಲ್ದಾಣಕ್ಕೆ ಅಗತ್ಯ ವಸ್ತುಗಳನ್ನು ಕಳುಹಿಸಲಾಗಿದೆ. 6.5 ಟನ್‌ ವೈದ್ಯಕೀಯ ಉಪಕರಣಗಳು ಹಾಗೂ 32 ಟನ್‌ ಅಗತ್ಯ ವಸ್ತುಗಳು ಸೇರಿ ಒಟ್ಟು 38.5 ಟನ್‌ ವಸ್ತುಗಳನ್ನು ಮಾನವೀಯತೆ ಆಧಾರದ ಮೇಲೆ ಪ್ಯಾಲೆಸ್ತೀನ್‌ಗೆ ಕಳುಹಿಸಲಾಗಿದೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿರುವ ಹಿಂಡನ್‌ ವಾಯುನೆಲೆಯಿಂದ ಅಗತ್ಯ ವಸ್ತುಗಳನ್ನು ಹೊತ್ತುಕೊಂಡ ವಿಮಾನವು ಹಾರಾಟ ಆರಂಭಿಸಿದೆ.

Leave a Reply

Your email address will not be published. Required fields are marked *

error: Content is protected !!