ಇದುವರೆಗೆ 1500 ಪೊಲೀಸರಿಗೆ ಕೊರೋನಾ ಪಾಸಿಟಿವ್, 73 ಸಿಬ್ಬಂದಿ ಸಾವು: ಪ್ರವೀಣ್ ಸೂದ್
ಮಡಿಕೇರಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಇದುವರೆಗೂ 1,500 ಪೊಲೀಸರಿಗೆ ಕೋರೋನಾ ಸೋಂಕು ತಗುಲಿದ್ದು, ಈ ಪೈಕಿ 73 ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾ ನಿದೇಶಕ ಪ್ರವೀಣ್ ಸೂದ್ ಅವರು ಶನಿವಾರ ಹೇಳಿದ್ದಾರೆ.
ಇಂದು ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕಿತ ಪೊಲೀಸರಿಗೆ ಮಾನಸಿಕ ಸ್ತೈರ್ಯ ನೀಡಲು ನಾನು ರಾಜ್ಯವ್ಯಾಪಿ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಚುರುಕಿನಿಂದ ಸಾಗಿದ್ದು ಚಿತ್ರಕಲಾವಿದರೂ ಸೇರಿದಂತೆ ಡ್ರಗ್ ಜಾಲದಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ನಿಶ್ಚಿತ ಎಂದು ಪ್ರವೀಣ್ ಸೂದ್ ಹೇಳಿದರು.
ಕೋಲಾರ, ರಾಯಚೂರುಗಳಲ್ಲಿಯೂ ಬೆಂಗಳೂರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಿದ್ದಾರೆ. ರಾಜ್ಯದ ಎಲ್ಲಾ ಭಾಗಗಳಲ್ಲಿಯೂ ಡ್ರಗ್ ದಂಧೆಕೋರರ ಸದೆಬಡೆಯುವಿಕೆಗೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ ಎಂದರು.
ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಪೊಲೀಸರು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಉತ್ತಮ ರೀತಿ ಕಾರ್ಯನಿರ್ವಹಿಸಿದ್ದಾರೆ. ಕೊರೋನಾ ನಿಯಂತ್ರಣದಲ್ಲೂ ಕೊಡಗು ಪೊಲೀಸರ ಕಾರ್ಯನಿರ್ವಹಣೆ ಗಮನಾರ್ಹ ಎಂದೂ ಶ್ಲಾಘಿಸಿದರು