JDS ಪಕ್ಷದಿಂದ ಸಿಎಂ ಇಬ್ರಾಹಿಂ ಉಚ್ಚಾಟನೆ: ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ನೇಮಕ
ಬೆಂಗಳೂರು: ನಮ್ಮದೇ ಒರಿಜಿನಲ್ ಜೆಡಿಎಸ್ ಎಂದು ಸ್ವಪಕ್ಷದ ವರಿಷ್ಠರ ವಿರುದ್ಧವೇ ಗುಡುಗಿದ್ದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ನಗರದ ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಹಿಂದಿನ ಅಧ್ಯಕ್ಷರ ಹೇಳಿಕೆಯನ್ನು ನಾನು ಪ್ರಸ್ತಾಪ ಮಾಡುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ, ಜೆಡಿಎಸ್ ಕೋರ್ ಕಮಿಟಿ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿದ್ದೇವೆ, ಎಲ್ಲರ ಅಭಿಪ್ರಾಯ ಪಡೆದು ಸಿ.ಎಂ.ಇಬ್ರಾಹಿಂ ಉಚ್ಚಾಟಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ನಮ್ಮದೇ ಒರಿಜಿನಲ್ ಜೆಡಿಎಸ್. ನಾನೇ ಪಕ್ಷದ ರಾಜ್ಯಾಧ್ಯಕ್ಷ ನಾನ್ಯಾಕೆ ಪಕ್ಷ ಬಿಟ್ಟು ಹೋಗಲಿ ಎಂದು ಸಿ.ಎಂ.ಇಬ್ರಾಹಿಂ ಗುಡುಗಿದ್ದರು. ಇಬ್ರಾಹಿಂ ಮಾತಿಗೆ ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇತರೆ ಜೆಡಿಎಸ್ ನಾಯಕರು ಸಿಡಿಮಿಡಿಗೊಂಡಿದ್ದರು.
ಅಲ್ಲದೇ ಕೆಲ ಜೆಡಿಎಸ್ ನಾಯಕರು ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಪಟ್ಟು ಹಿಡಿದಿದ್ದರು. ಅದರಂತೆ ಇದೀಗ ಅಂತಿಮವಾಗಿ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ.
ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಜೆಡಿಎಸ್ ಕೋರ್ ಕಮಿಟಿ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿದ್ದೇವೆ. ಎಲ್ಲರ ಅಭಿಪ್ರಾಯ ಪಡೆದು ಸಿ.ಎಂ.ಇಬ್ರಾಹಿಂ ಉಚ್ಚಾಟಿಸಿದ್ದೇವೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ನೇಮಕ ಮಾಡಿದ್ದೇವೆ ಎಂದರು.
ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ಈ ಕೂಡಲೇ ಜಾರಿಗೆ ಬರುವಂತೆ ವಿಸರ್ಜನೆ ಮಾಡಿ, ಪಕ್ಷದ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಲು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಮುಂಬರುವ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಸಿಎಂ ಇಬ್ರಾಹಿಂ ಅಸಮಾಧಾನ ವ್ಯಕ್ತ ಪಡಿಸಿದ್ದರು. ಜೊತೆಗೆ ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಿದ್ದರು.