ಸೋಲಿನ ಭಯದಿಂದ ಐಟಿ ದಾಳಿ ಮಾಡಿಸುತ್ತಿರುವ ಮೋದಿ ಸರಕಾರ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ʼʼಪಂಚರಾಜ್ಯಗಳಲ್ಲಿನ ಚುನಾವಣೆ ಸೋಲಿನ ಭಯ ಮತ್ತು ಶ್ರೀಮಂತ ಉದ್ಯಮಿ – ಗುತ್ತಿಗೆದಾರರನ್ನು ಬ್ಲಾಕ್ ಮೇಲ್ ಮಾಡುವ ದುರುದ್ದೇಶದ ಕಾರಣಕ್ಕಾಗಿಯೇ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಐಟಿ- ಈಡಿ ದಾಳಿಗಳನ್ನು ನಡೆಸುತ್ತಿದೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಸಂಬಂಧ ಎಕ್ಸ್‌ ನಲ್ಲಿ ಸರಣಿ ಪೋಸ್ಟ್‌ ಮಾಡಿರುವ ಅವರು, ʼʼಕಾರ್ಪೊರೆಟ್‌ ಭ್ರಷ್ಟಾಚಾರದ ಮೂಲಕ ಲಕ್ಷಾಂತರ ಕೋಟಿ ರೂಪಾಯಿ ಲೂಟಿ ಹೊಡೆದು ದೇಶವನ್ನೇ ಅದಾನಿ ಕೈಗೆ ಒತ್ತೆಯಿಟ್ಟಿರುವ ಈ ಬಿಜೆಪಿಗರು ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದೊಡ್ಡ ಕುಚೋದ್ಯ! ಅದಾನಿ ಎನ್ನುವ ಉದ್ಯಮಿಯ ಒಂದೊಂದು ಹಗರಣಗಳು ಲಕ್ಷ ಕೋಟಿಗಳನ್ನು ದಾಟುತ್ತಿವೆ! ಸಾವಿರ ಕೋಟಿಗಳ ಅವ್ಯವಹಾರಕ್ಕೆ ಲೆಕ್ಕವೇ ಇಲ್ಲವಾಗಿದೆ. ಈ ಬಗ್ಗೆ ಕಾಂಗ್ರೆಸ್‌ ಪಕ್ಷ ಕೇಳಿರುವ ನೂರು ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಹೇಳಲು ಬಿಜೆಪಿಯ ನಾಯಕರಿಗೆ, ವಿಶೇಷವಾಗಿ ಮೋದಿಯವರಿಗೆ ಈವರೆಗೆ ಸಾಧ್ಯವಾಗಿಲ್ಲʼʼ ಎಂದು ಹೇಳಿದ್ದಾರೆ.

ಗುತ್ತಿಗೆದಾರರೊಬ್ಬರನ್ನು ಹಣಕ್ಕಾಗಿ ಪೀಡಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು ಮತ್ತು ಭ್ರಷ್ಟಾಚಾರದ ಆರೋಪದ ಮೇಲೆಯೇ ಜೈಲಿಗೆ ಹೋಗಿ ಬಂದಿರುವ ಬಿ.ಎಸ್. ಯಡಿಯೂರಪ್ಪನವರು ಮತ್ತು ಅವರ ಮಗ ಕೂಡಾ ಸತ್ಯಹರಿಶ್ಚಂದ್ರನಂತೆ ಮಾತನಾಡುತ್ತಿರುವುದು ತಮಾಷೆಯಾಗಿ ಕಾಣುತ್ತಿದೆʼʼ ಎಂದು ಅವರು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!