ದಕ್ಷಿಣ ರಾಜ್ಯಗಳಲ್ಲಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ
ನವದೆಹಲಿ: ಭಾರತದ ಹಲವೆಡೆ ಅಂಫಾನ್ ಚಂಡಮಾರುತ ಪ್ರಭಾವ ಬೀರಲಿದ್ದು, ದಕ್ಷಿಣ ರಾಜ್ಯಗಳಲ್ಲಿ ಈ ಪ್ರಭಾವ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಭಾನುವಾರ ಎಚ್ಚರಿಕೆ ನೀಡಿದೆ.
ಮುಂದಿನ 12 ಗಂಟೆಗಳ ಅವಧಿಯಲ್ಲಿ ಆಗ್ನೇಯ ಬಂಗಾಳಕೊಲ್ಲಿ ಹಾಗೂ ನೆರೆಹೊರೆಯ ರಾಜ್ಯಗಳಲ್ಲಿ ತನ್ನ ಪ್ರಭಾವವನ್ನು ತೀವ್ರಗೊಳಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ನಾಳೆ ಬೆಳಿಗ್ಗೆವರೆಗೆ ಇದರ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.
ಈ ಸಂಬಂಧ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಗಳು ಮುನ್ನೆಚ್ಚರಿಕೆ ವಹಿಸಿವೆ. ಚಂಡಮಾರುತದಿಂದಾಗುವ ಅನಾಹುತಗಳನ್ನು ತಡೆಗಟ್ಟಲು ಎಲ್ಲಾ ಸಿದ್ಧತೆ ಮಾಡಿಕೊಂಡಿವೆ. ಈಗಾಗಲೆ ಒಡಿಶಾದಲ್ಲಿ ಚಂಡಮಾರುತ ಅಂಫಾನ್ ಪ್ರಭಾವ ಬೀರುವ ಸಾಧ್ಯತೆಗಳಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶುಕ್ರವಾರವೇ 12 ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.
ಒಡಿಶಾ ಉತ್ತರ ಭಾಗದ ಕರಾವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವಂತೆ ಸೂಚಿಸಲಾಗಿದೆ. ಚಂಡಮಾರುತದಿಂದ ಹಾನಿ ಉಂಟಾದರೆ, ಆಶ್ರಯಕ್ಕಾಗಿ ಕಟ್ಟಡಗಳನ್ನು ಗುರುತಿಸುವಂತೆ ತಿಳಿಸಲಾಗಿದೆ. ಬಹುತೇಕ ಆಶ್ರಯ ಕಟ್ಟಡಗಳನ್ನು ಕೋವಿಡ್–19 ಕ್ವಾರಂಟೈನ್ ಕೇಂದ್ರಗಳಾಗಿ ಬಳಕೆ ಮಾಡಲಾಗುತ್ತಿದೆ