ಜಾಗತಿಕ ಹಸಿವು ಸೂಚ್ಯಂಕ: 111ನೇ ಸ್ಥಾನಕ್ಕೆ ಕುಸಿದ ಭಾರತ- ಸಮೀಕ್ಷೆಯೇ ತಪ್ಪು ಎಂದ ಕೇಂದ್ರ
ನವದೆಹಲಿ: 2023ರ ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯ ಭಾರತ 111ನೇ ಸ್ಥಾನಕ್ಕೆ ಕುಸಿದಿದೆ ಎಂಬ ಗ್ಲೋಬಲ್ ಹಂಗರ್ ಇಂಡೆಕ್ಸ್ ವರದಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕೇಂದ್ರ ಸರ್ಕಾರ, ಇದು ದೇಶದ ನಿಜವಾದ ಸ್ಥಾನವನ್ನು ಪ್ರತಿಬಿಂಬಿಸುತ್ತಿಲ್ಲ. “ಹಸಿವಿನ” ಸಮೀಕ್ಷೆಯೇ ದೋಷಯುಕ್ತ ಎಂದು ಹೇಳಿದೆ.
ಹಸಿವು ಸೂಚ್ಯಂಕವು “ಗಂಭೀರವಾದ ಕ್ರಮಶಾಸ್ತ್ರೀಯ ಸಮಸ್ಯೆಗಳಿಂದ ಬಳಲುತ್ತಿದೆ ಮತ್ತು ದುರುದ್ದೇಶ ಪೂರಿತ ಉದ್ದೇಶವನ್ನು ಹೊಂದಿದೆ” ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳಿದೆ.
ಗುರುವಾರ ಬಿಡುಗಡೆಯಾದ ಜಾಗತಿಕ ಹಸಿವು ಸೂಚ್ಯಂಕ-2023 ರಲ್ಲಿ ಭಾರತ 125 ದೇಶಗಳ ಪೈಕಿ 111ನೇ ಸ್ಥಾನದಲ್ಲಿದೆ. ದೇಶವು ಅತಿ ಹೆಚ್ಚು ಮಕ್ಕಳ ಅಪೌಷ್ಟಿಕತೆ ಪ್ರಮಾಣವನ್ನು ಅಂದರೆ ಶೇಕಡಾ 18.7 ರಷ್ಟು ಹೊಂದಿದೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷ ಭಾರತ 107ನೇ ಸ್ಥಾನದಲ್ಲಿತ್ತು. ಈ ವರ್ಷ 111ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ನೆರೆಯ ದೇಶಗಳಾದ ಪಾಕಿಸ್ತಾನ(102ನೇ ಸ್ಥಾನ), ಬಾಂಗ್ಲಾದೇಶ (81), ನೇಪಾಳ (69) ಹಾಗೂ ಶ್ರೀಲಂಕಾ (60) ಭಾರತಕ್ಕಿಂತಲೂ ಉತ್ತಮ ಸ್ಥಾನದಲ್ಲಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಹಸಿವು “ಸೂಚ್ಯಂಕದ ಸಮೀಕ್ಷೆಯೇ ತಪ್ಪಾಗಿದೆ ಮತ್ತು ಅದು ಗಂಭೀರ ಕ್ರಮಶಾಸ್ತ್ರೀಯ ಸಮಸ್ಯೆಗಳಿಂದ ಬಳಲುತ್ತಿದೆ. “ಸೂಚ್ಯಂಕದ ಲೆಕ್ಕಾಚಾರ ಹಾಕಲು ಬಳಸಿರುವ ನಾಲ್ಕು ಸೂಚಕಗಳ ಪೈಕಿ ಮೂರು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆ ಹಾಗೂ ಅದು ಇಡೀ ಜನಸಂಖ್ಯೆಯ ಪ್ರಾತಿನಿಧಿತ್ವ ಆಗಲು ಸಾಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಗ್ಲೋಬಲ್ ಹಂಗರ್ ಇಂಡೆಕ್ಸ್ (ಜಿಎಚ್‌ಐ) ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಸಿವಿನ ಪ್ರಮಾಣವನ್ನು ಸಮಗ್ರವಾಗಿ ಅಳೆಯುವ ಮತ್ತು ಟ್ರ್ಯಾಕ್ ಮಾಡುವ ವಿಧಾನವಾಗಿದೆ.