ಇಸ್ರೇಲ್‌ನಲ್ಲಿರುವ ಭಾರತೀಯರನ್ನು “ಅಪರೇಶನ್ ಅಜಯ್” ಮೂಲಕ ಏರ್ ಲಿಫ್ಟ್
ಹೊಸದಿಲ್ಲಿ: ಇಸ್ರೇಲ್ ಸೇನೆ ಹಾಗೂ ಹಮಾಸ್ ನಡುವೆ ಭೀಕರ ಯುದ್ಧ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಇಸ್ರೇಲ್ ನಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಭಾರತವು “ಅಪರೇಶನ್ ಅಜಯ್” ಕಾರ್ಯಾಚರಣೆ ಯನ್ನು ಆರಂಭಿಸಿದೆ. ಇಸ್ರೇಲ್ ನಲ್ಲಿ ಸುಮಾರು 18 ಸಾವಿರ ಭಾರತೀಯರಿದ್ದಾರೆಂದು ಅಂದಾಜಿಸಲಾಗಿದೆ.
‘‘ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ವಿಶೇಷ ವಿಮಾನಗಳ ಏರ್ಪಾಡುಗಳನ್ನು ಮಾಡಲಾಗಿದೆ. ವಿದೇಶದಲ್ಲಿರುವ ನಮ್ಮ ಪ್ರಜೆಗಳ ಸುರಕ್ಷತೆ ಹಾಗೂ ಕ್ಷೇಮಕ್ಕೆ ಕೇಂದ್ರ ಸರಕಾರ ಸಂಪೂರ್ಣ ಬದ್ಧವಾಗಿದೆ’’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಸಾಮಾಜಿಕ ಜಾಲತಾಣ x ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತಕ್ಕೆ ವಾಪಾಸಾಗಲು ತಮ್ಮನ್ನು ನೋಂದಾಯಿಸಿ ಕೊಂಡ ಭಾರತೀಯರ ಮೊದಲ ತಂಡದವನ್ನು ಗುರುವಾರ ವಿಶೇಷ ವಿಮಾನದ ಮೂಲಕ ಮೂಲಕ ಸ್ವದೇಶಕ್ಕೆ ವಾಪಸ್ ಕರೆತರಲಾಗುವುದು ಎಂದು ಇಸ್ರೇಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ತಿಳಿಸಿದೆ.
ನಾಳೆ ಭಾರತಕ್ಕೆ ಹೊರಡಲಿರುವ ವಿಶೇಷ ವಿಮಾನ ದಲ್ಲಿ ಪ್ರಯಾಣಿಸಲು ಹೆಸರು ನೋಂದಾಯಿಸಿಕೊಂಡ ಭಾರತೀಯರಿಗೆ ಈ-ಮೇಲ್ ಕಳುಹಿಸಲಾಗಿದೆ. ಅನಂತರದ ವಿಮಾನಗಳಲ್ಲಿ ಪ್ರಯಾಣಿಸಲು ನೋಂದಾಯಿಸಿಕೊಂಡಿರುವ ಇತರ ಭಾರತೀಯರಿಗೂ ಈ-ಮೇಲ್ ಸಂದೇಶಗಳನ್ನು ಕಳುಹಿಸಲಾಗುವುದು ಭಾರತೀಯ ರಾಯಭಾರಿ ಕಚೇರಿ x ನಲ್ಲಿ ಪೋಸ್ಟ್ ಮಾಡಿದೆ.